ಪರರ ಹೆಂಡತಿ ಪರಮ ಸುಂದರಿ : ತೆನಾಲಿ ರಾಮಕೃಷ್ಣನ ಹಾಸ್ಯಕಥೆಗಳು - Stories of Tenali Ramakrishna in Kannada - tenali rama stories in kannada
ಶ್ರೀಕೃಷ್ಣ ದೇವರಾಯ ಪ್ರಜಾಪ್ರಿಯ ರಾಜನಾಗಿದ್ದನು. ಆತ ವಿಜಯನಗರದ ಎಲ್ಲ ಪ್ರಜೆಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದನು. ಅದಕ್ಕಾಗಿ ಮಾರುವೇಷದಲ್ಲಿ ರಾಜಧಾನಿಯಲ್ಲಿ ಸಂಚರಿಸಿ ರಾಜ್ಯದ ಕುಂದುಕೊರತೆಗಳನ್ನು ಸ್ವತಃ ತಾನೇ ಖುದ್ದಾಗಿ ಪರಿಶೀಲಿಸುತ್ತಿದ್ದನು. ಹೀಗೆ ಒಮ್ಮೆ ಆತ ಮಾರುವೇಷದಲ್ಲಿ ಸಂಚರಿಸುತ್ತಿದ್ದಾಗ ಅವನಿಗೆ ತೆನಾಲಿ ರಾಮಕೃಷ್ಣನ ಮನೆ ಇಲ್ಲೇ ಸಮೀಪದಲ್ಲೇ ಇದೇ ಎಂಬುದು ಗೊತ್ತಾಯಿತು. ಕೂಡಲೇ ಆತ ಅವನ ಮನೆಗೆ ತೆರಳಿದನು. ಮನೆಯಲ್ಲಿ ರಾಮಕೃಷ್ಣನಿರಲಿಲ್ಲ. ಬದಲಾಗಿ ಅವನ ಅತ್ಯಂತ ಸುಂದರವಾದ ಹೆಂಡತಿಯಿದ್ದಳು. ಶ್ರೀಕೃಷ್ಣ ದೇವರಾಯ ತನ್ನ ಮಾರುವೇಷವನ್ನು ಕಳಚಿದಾಗ ಆಕೆ ಅವನನ್ನು ಗುರ್ತಿಸಿ ವಂದಿಸಿದಳು. ನಂತರ ಅವನನ್ನು ಉಚಿತಾಸನದಲ್ಲಿ ಕೂಡಿಸಿ ತಿಂಡಿತೀರ್ಥಗಳಿಂದ ಆದರಿಸಿದಳು. ರಾಯನಿಗೆ ರಾಮಕೃಷ್ಣನ ಹೆಂಡತಿ ಇಂಥ ಅಪ್ರತಿಮ ಚೆಲುವೆ ಎಂಬುದು ಗೊತ್ತಿರಲಿಲ್ಲ. ಆತ ಅದೇ ಯೋಚನೆಯಲ್ಲಿ ಮುಳುಗಿದ್ದನು. ಅಷ್ಟರಲ್ಲಿ ಮನೆಗೆ ಬಂದ ತೆನಾಲಿ ರಾಮಕೃಷ್ಣ ರಾಯನನ್ನು ತನ್ನ ಮನೆಯಲ್ಲಿ ನೋಡಿ ಆಶ್ಚರ್ಯಚಕಿತನಾದನು.
ತೆನಾಲಿ ರಾಮಕೃಷ್ಣ : ಮಹಾಪ್ರಭು, ತಾವೇನು ಇಲ್ಲಿ?
ಶ್ರೀಕೃಷ್ಣ ದೇವರಾಯ : ಹಾಗೆಯೇ ಮಾರುವೇಷದಲ್ಲಿ ಪ್ರಜೆಗಳ ಯೋಗಕ್ಷೇಮವನ್ನು ಪರೀಕ್ಷಿಸಲು ಹೊರಟಿದ್ದೆ. ನಿನ್ನನ್ನು ನೋಡಬೇಕೆನಿಸಿತು. ಅದಕ್ಕಾಗಿ ಬಂದೆ. ಯಾಕೆ ಬರಬಾರದಿತ್ತೆ?
ತೆನಾಲಿ ರಾಮಕೃಷ್ಣ : ಹಾಗೇನಿಲ್ಲ ಪ್ರಭು. ನೀವು ಬಂದದ್ದು ಬಡವನ ಮನೆಗೆ ಭಾಗ್ಯ ಬಂದಂತಾಯಿತು. ನಿಜವಾಗಿಯೂ ನಾನು ಭಾಗ್ಯಶಾಲಿ ಪ್ರಭು.. ನಾನಿಲ್ಲದಿರುವಾಗ ಏನಾದರೂ ವ್ಯತ್ಯಾಸವಾಗಿದ್ದರೆ ದಯವಿಟ್ಟು ಕ್ಷಮಿಸಿ ಪ್ರಭು.
ಶ್ರೀಕೃಷ್ಣ ದೇವರಾಯ : ಹಾಗೇನಿಲ್ಲ ರಾಮಕೃಷ್ಣ, ನಮ್ಮ ಉಪಚಾರದಲ್ಲಿ ಏನು ವ್ಯತ್ಯಾಸವಾಗಿಲ್ಲ. ನಿಜಕ್ಕೂ ನೀನು ಭಾಗ್ಯಶಾಲಿ. ನಿನಗೆ ತಕ್ಕ ಹೆಂಡತಿಯೇ ಸಿಕ್ಕಿದ್ದಾಳೆ. ರೂಪವತಿ, ಗುಣವತಿ, ವಿನಯವತಿಯಾಗುವ ಜೊತೆಗೆ ನಿನ್ನ ಮನೆಯ ಮಹಾಲಕ್ಮೀ ಆಗಿದ್ದಾಳೆ.
ಉಪಹಾರ ಇತ್ಯಾದಿಗಳೆಲ್ಲ ಮುಗಿದ ನಂತರ ತೆನಾಲಿ ರಾಮಕೃಷ್ಣ ಶ್ರೀಕೃಷ್ಣ ದೇವರಾಯನೊಡನೆ ಸಾವಕಾಶವಾಗಿ ಹೆಜ್ಜೆ ಹಾಕುತ್ತಾ ಅರಮನೆಯೆಡೆಗೆ ನಡೆದನು. ಮಾರ್ಗಮಧ್ಯದಲ್ಲಿ ರಾಯ ಮತ್ತೊಮ್ಮೆ ರಾಮಕೃಷ್ಣನ ಹೆಂಡತಿಯ ಸೌಂದರ್ಯವನ್ನು ಹೊಗಳಿದನು.
ಶ್ರೀಕೃಷ್ಣ ದೇವರಾಯ : ರಾಮಕೃಷ್ಣ ನೀನು ನಿಜಕ್ಕೂ ಅದೃಷ್ಟಶಾಲಿ. ನಿನಗೆ ಅಪ್ಸರೆಯಂಥ ಹೆಂಡತಿ ಸಿಕ್ಕಿದ್ದಾಳೆ. ಆಕೆ ಅಪ್ರತಿಮ ಚೆಲುವೆಯಾಗಿದ್ದಾಳೆ.
(ಸೌಂದರ್ಯ ಪ್ರಿಯನಾಗಿದ್ದ ಶ್ರೀಕೃಷ್ಣ ದೇವರಾಯ ನಿರ್ಮಲ ಮನಸ್ಸಿನಿಂದ ಹೀಗೆ ಹೇಳಿದನು.)
ತೆನಾಲಿ ರಾಮಕೃಷ್ಣ : ಹೌದು ಮಹಾಪ್ರಭು, ಲೋಕರೂಢಿಯಾದ ಮಾತೊಂದಿದೆ.
ಶ್ರೀಕೃಷ್ಣ ದೇವರಾಯ : ಯಾವ ಮಾತದು ರಾಮಕೃಷ್ಣ?
ತೆನಾಲಿ ರಾಮಕೃಷ್ಣ : ಪ್ರಭು "ಪರರ ಹೆಂಡತಿ ಪರಮ ಸುಂದರಿ..." ಎಂಬ ಮಾತು ಜನಜನಿತವಾಗಿದೆ. ಅಲ್ಲದೆ "ಯೌವ್ವನದಲ್ಲಿ ಕತ್ತೆಯೂ ಸುಂದರ ಯುವತಿಯಂತೆ ಕಾಣುತ್ತದೆ..." ಎಂಬ ಗಾದೆಯು ಇದೆಯಲ್ಲವೇ ಪ್ರಭು...?
ಶ್ರೀಕೃಷ್ಣ ದೇವರಾಯ : ಆದರೂ ನೀನು ಅದೃಷ್ಟವಂತನೇ ಬಿಡು. ನಿನಗೆ ಅಪ್ಸರೆಯಂಥ ಹೆಂಡತಿ ಸಿಕ್ಕಿದ್ದಾಳೆ.
ತೆನಾಲಿ ರಾಮಕೃಷ್ಣ : ಹಾಗೇನಿಲ್ಲ ಪ್ರಭು, ನಾನು ಅವಳನ್ನು ಮದುವೆಯಾದ ಹೊಸತರಲ್ಲಿ ಅವಳಂಥ ಸುಂದರಿ ಈಡಿ ರಾಜ್ಯದಲ್ಲೇ ಯಾರು ಇಲ್ಲ ಎಂದುಕೊಂಡಿದ್ದೆ. ಆದರೆ ಅರಮನೆಯಲ್ಲಿ ನಿಮ್ಮ ಗುಜರಾತಿ ರಾಣಿಯನ್ನು ನೋಡಿದಾಗ ನನ್ನ ಲೆಕ್ಕಾಚಾರ ತಲೆಕೆಳಗಾಯಿತು. ಅವರ ಸೌಂದರ್ಯದ ಮುಂದೆ ನನ್ನವಳು ಯಾವ ಲೆಕ್ಕ? ಮಹಾರಾಣಿಯವರನ್ನು ಒಮ್ಮೆ ನೋಡಿದರೆ ಮತ್ತೆಮತ್ತೆ ನೋಡಬೇಕೆನಿಸುತ್ತದೆ ಅಲ್ಲವೇ ಮಹಾಪ್ರಭು?
ಶ್ರೀಕೃಷ್ಣ ದೇವರಾಯ : ಹೌದು ರಾಮಕೃಷ್ಣ. ನೀನು ಹೇಳುವ ಮಾತು ನೂರಕ್ಕೆ ನೂರು ಸತ್ಯವಾಗಿದೆ. ತನ್ನ ಹೆಂಡತಿ ಎಷ್ಟೇ ಸುಂದರವಾಗಿದ್ದರೂ ಸಹ ಪರರ ಹೆಂಡತಿಯೇ ಪರಮ ಸುಂದರಿಯಂತೆ ಕಾಣುತ್ತಾಳೆ...
ತಾನು ಹೇಳಿದ್ದನ್ನು ಮಹಾರಾಜರು ತಪ್ಪಾಗಿ ಭಾವಿಸಿ ಕೋಪಿಸಿಕೊಳ್ಳಬಹುದು ಎಂಬ ಭಯದಲ್ಲಿ ರಾಮಕೃಷ್ಣ ತೆಪ್ಪಗೆ ಅವರೊಡನೆ ಹೆಜ್ಜೆ ಹಾಕಿದನು. ಮಹಾರಾಣಿಯನ್ನು ಅತಿಯಾಗಿ ಹೊಗಳಿದ್ದು ಸರಿಯಲ್ಲವೆಂದು ರಾಮಕೃಷ್ಣನಿಗೆ ತಡವಾಗಿ ಅರಿವಾಯಿತು. ಇಬ್ಬರಿಗೂ ತಮ್ಮತಮ್ಮ ತಪ್ಪಿನ ಅರಿವಾಗಿತ್ತು. ಅದಕ್ಕಾಗಿ ಇಬ್ಬರು ಮನಸ್ಸೊಳಗೆ "ಪರರ ಹೆಂಡತಿ ಪರಮ ಸುಂದರಿ..." ಎಂಬ ಮಿಥ್ಯವನ್ನು ಒಪ್ಪಿಕೊಂಡು ಅರಮನೆ ಪ್ರವೇಶಿಸಿದರು. ಅವತ್ತಿನ ದಿನ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದೆ ಪೇಚಿಗೆ ಸಿಲುಕಿದರು. ಆದರೆ ಮರುದಿನ ಎಲ್ಲವೂ ಸರಿಯಾಗಿತ್ತು... "ಪರರ ಹೆಂಡತಿ ಪರಮ ಸುಂದರಿ..." ಎಂಬ ಅಭಿಪ್ರಾಯ ನಿಮ್ಮಲ್ಲಿದ್ದರೆ ಪ್ಲೀಸ್ ಇವತ್ತೇ ಅದನ್ನ ಕಿತ್ತಾಕಿ. ನೀವು ಪರರನ್ನು ಪವಿತ್ರ ದೃಷ್ಟಿಯಿಂದ ನೋಡಿದರೆ ಮಾತ್ರ ಪರರು ನಿಮ್ಮವರನ್ನು ಪವಿತ್ರ ದೃಷ್ಟಿಯಿಂದ ನೋಡುತ್ತಾರೆ... To be Continued...
Click Here To Read Next Part ⇩⇩
Click Here To Read Next Part ⇩⇩