ವಿಶ್ವ ವಿಖ್ಯಾತ ಪ್ರೇಮ ಕಥೆಗಳು - World Famous Love Stories in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ವಿಶ್ವ ವಿಖ್ಯಾತ ಪ್ರೇಮ ಕಥೆಗಳು - World Famous Love Stories in Kannada

ವಿಶ್ವ ವಿಖ್ಯಾತ ಪ್ರೇಮ ಕಥೆಗಳು - World Famous Love Stories in Kannada

1) ರಾಧೆ ಮತ್ತು ಕೃಷ್ಣನ ಪ್ರೇಮಕಥೆ - Love Story of Radha and Krishna in Kannada 

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

              ಕೃಷ್ಣನಿಗೆ ರುಕ್ಮಿಣಿ ಸಮೇತ ಏಳು ಮಹಾರಾಣಿಯರಲ್ಲದೆ ಒಟ್ಟು 16,100 ಪತ್ನಿಯರಿದ್ದರು. 1,61,080 ಮಕ್ಕಳಿದ್ದರು. ಆದರೆ ಪ್ರೇಯಸಿ ಮಾತ್ರ ಒಬ್ಬಳೇ ಇದ್ದಳು. ಅವಳೇ ರಾಧೆ. ಕೃಷ್ಣನ ಮನಸ್ಸು ಸಂಪೂರ್ಣವಾಗಿ ರಾಧೆಯ ಸ್ವತ್ತಾಗಿತ್ತು. ರಾಧೆಯ ಹೆಸರಿಲ್ಲದೆ  ಕೃಷ್ಣನ ಹೆಸರು, ಪ್ರಖ್ಯಾತಿ, ಫೋಟೋಗಳೆಲ್ಲವು ಅಪೂರ್ಣ. ರಾಧೆ ಶ್ರೀಕೃಷ್ಣನನ್ನು ಮದುವೆಯಾಗಲಿಲ್ಲ. ಆದರೂ ಸಾವಿರಾರು ಪತ್ನಿಯರಿಗೆ ಸಿಗದ ಸ್ಥಾನ, ಗೌರವ, ಪ್ರಖ್ಯಾತಿ ರಾಧೆಗೆ ಸಿಕ್ಕಿದೆ.

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

                  ಬ್ರಂದಾವನದಲ್ಲಿ  ಕೃಷ್ಣ ಕೊಳಲು ಬಾರಿಸಿದಾಗ ಬರೀ ಗೋವುಗಳಷ್ಟೇ ಬರುತ್ತಿರಲಿಲ್ಲ. ಅವುಗಳ ಜೊತೆಗೆ ಗೋಪಿಕೆಯರು ಸಹ ಬರುತ್ತಿದ್ದರು. ಅವರಲ್ಲಿ ಕೃಷ್ಣನ ಮನ ಕದ್ದವಳು ರಾಧೆ ಮಾತ್ರ. ಕೃಷ್ಣನ ನೀಲಿ ಮೈಬಣ್ಣ, ಬಾದಾಮಿ ಆಕಾರದ ಕಂಗಳು, ತಿಳಿ ಗುಲಾಬಿ ತುಟಿಗಳು, ಉಕ್ಕಿನಂಥ ಶರೀರ, ಕಪ್ಪು ಗುಂಗುರು ಕೂದಲುಗಳಲ್ಲಿ ಸಿಲುಕಿಸಿದ ನವಿಲು ಗರಿ, ತುಂಟತನವನ್ನು ನೋಡಿ ಎಲ್ಲ ಗೋಪಿಕೆಯರು ಅವನ ಮೇಲೆ ಮೋಹಿತರಾಗಿದ್ದರು. ಆದರೆ ರಾಧೆ ಮಾತ್ರ ಕೃಷ್ಣನ ಕೊಳಲ ಧ್ವನಿಗೆ ತನ್ನ ಮನಸ್ಸನ್ನು ಕಳೆದುಕೊಂಡಿದ್ದಳು. ಕೃಷ್ಣನ ಕೊಳಲ ನಾದಕ್ಕೆ ರಾಧೆ ನರ್ತಿಸುವಾಗ ಸ್ವರ್ಗದ ಸೊಬಗೆಲ್ಲವು ಬ್ರಂದಾವನದಲ್ಲಿ ಸೃಷ್ಟಿಯಾಗುತ್ತಿತ್ತು. ಪ್ರತಿ ಮನೆಯಲ್ಲಿ ಬೆಣ್ಣೆ ಕದಿಯುತ್ತಿದ್ದ ಕಳ್ಳ ಕೃಷ್ಣನ ಮನಸ್ಸನ್ನು ರಾಧೆ ಕದ್ದಿದ್ದಳು. ಕೃಷ್ಣ ಅವಳನ್ನು ಮದುವೆಯಾಗಲು ಬಯಸಿದಾಗ ಆಕೆ ಬಲವಾದ ಹಾಗೂ ಪವಿತ್ರವಾದ ಕಾರಣಗಳನ್ನಿಟ್ಟುಕೊಂಡು ಅವನನ್ನು ಮದುವೆಯಾಗಲು ನಿರಾಕರಿಸಿದಳು.


ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

                            ರಾಧೆಗೆ 6 ವರ್ಷವಿದ್ದಾಗ ಆಯನ್ ಎಂಬುವ ಯೋಧನೊಂದಿಗೆ ಬಾಲ್ಯ ವಿವಾಹವಾಗಿತ್ತು. ಆದರೆ ಆತ ಮದುವೆಯಾದ ಒಂದು ವರ್ಷದೊಳಗೆ ಗತಿಸಿದನು. ಅನಂತರ ರಾಧೆ ಕೃಷ್ಣನಿಗೆ ಸಿಕ್ಕಳು. ಆಕೆ ಕೃಷ್ಣನಿಗಿಂತ ಮೂರ್ನಾಲ್ಕು ವರ್ಷ ದೊಡ್ಡವಳಾಗಿದ್ದಳು. ತನಗೆ ಈಗಾಗಲೇ ಮದುವೆಯಾಗಿರುವುದರಿಂದ ರಾಧೆ ತನ್ನ ಮೂರ್ಖ ಭಾವನೆಗಳನ್ನು ಬಚ್ಚಿಟ್ಟು ಕೃಷ್ಣನ ಮೇಲೆ ಪ್ರೇಮದ ಭಾವನೆಗಳನ್ನಷ್ಟೇ ಹೊಂದಿದಳು. ಅವಳು ಕೃಷ್ಣನನ್ನು ಪ್ರೀತಿಸಿದಳು. ಆದರೆ ತನಗೆ ಈಗಾಗಲೇ ಮದುವೆಯಾಗಿರುವುದರಿಂದ ಅವನನ್ನು ಮದುವೆಯಾಗಲು  ನಿರಾಕರಿಸಿದಳು. ಅಲ್ಲದೆ "ಕೃಷ್ಣ ರಾಜನಾಗುವವನು, ಆದರೆ ನಾನು ಗೋವುಗಳನ್ನು ಮೇಯಿಸುವ ಸಾಮಾನ್ಯ ಗೋಪಿಕೆ" ಎಂಬ ಕೀಳು ಭಾವನೆ ಅವಳ ಮನಸ್ಸಲ್ಲಿ ಮನೆ ಮಾಡಿತ್ತು.

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

       ಈಗಾಗಲೇ ಮದುವೆಯಾಗಿದ್ದರು, ತಾನು ಸಾಮಾನ್ಯ ದನ ಕಾಯೋಳು ಎಂಬ ಭಾವನೆಯಿದ್ದರೂ ರಾಧೆ ಮನಸ್ಸು ಮಾಡಿದ್ದರೆ ಶ್ರೀಕೃಷ್ಣನನ್ನೇ ಮದುವೆಯಾಗುತ್ತಿದ್ದಳು. ಆದರೆ ಅವಳ ಪ್ರೇಮದ ಪರಿಕಲ್ಪನೆಯೇ ಬೇರೆಯಾಗಿತ್ತು. ರಾಧೆಯ ಹಾಗೂ ಕೃಷ್ಣನ ಮನಸ್ಸುಗಳು ಪರಸ್ಪರ ಮಿಲನವಾಗಿದ್ದವು. ಅವರಿಬ್ಬರು ಎರಡು ದೇಹ ಒಂದೇ ಮನಸ್ಸು ಎಂಬತ್ತಾಗಿದ್ದರು. ಅವರ ಮಿಲನವಾದ ಮನಸ್ಸುಗಳನ್ನು ಮದುವೆಯ ಬಂಧದಿಂದ ಇಲ್ಲವೇ ದೈಹಿಕ ಸಂಬಂಧದಿಂದ ಮಲಿನ ಮಾಡುವ ಆಸಕ್ತಿ ರಾಧೆಗೆ ಇರಲಿಲ್ಲ. ಅಲ್ಲದೇ ಮನಸ್ಸುಗಳ ಪ್ರೀತಿಗೆ ಮದುವೆಯ ಬೇಲಿ ಅನಾವಶ್ಯಕ ಎಂಬುದು ಅವಳ ಬಲವಾದ ನಂಬಿಕೆಯಾಗಿತ್ತು. ಅದಕ್ಕಾಗಿ ರಾಧೆ ಶ್ರೀಕೃಷ್ಣನನ್ನು ಮದುವೆಯಾಗಲಿಲ್ಲ.

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

                ರಾಧೆಯ ಮಾತನ್ನು ಮನ್ನಿಸಿ ಶ್ರೀಕೃಷ್ಣ ತನ್ನ ಜವಾಬ್ದಾರಿಗಳನ್ನು ನಿಭಾಯಿಸುವುದಕ್ಕಾಗಿ ಬ್ರಂದಾವನವನ್ನು ಬಿಟ್ಟು ದ್ವಾರಕೆಗೆ ಬಂದನು. ಆತ ರಾಜನಾದ ಮೇಲೆ ಮತ್ತೆ ಯಾವತ್ತೂ ಮರಳಿ ಬ್ರಂದಾವನಕ್ಕೆ ತೆರಳಲೇ ಇಲ್ಲ. ರಾಧೆ ತನ್ನ ಜೀವನದ ಪ್ರತಿ ಕ್ಷಣವನ್ನು ಶ್ರೀಕೃಷ್ಣನ ನೆನಪಲ್ಲಿ ಕಳೆದಳು. ರಾಜನಾದ ಮೇಲೆ ಕೃಷ್ಣನಿಗೆ ಸಾಕಷ್ಟು ಜವಾಬ್ದಾರಿಗಳಿರುವುದರಿಂದ ಆತ ರಾಧೆಯನ್ನು ಭೇಟಿಯಾಗಲಿಲ್ಲ. ಆದರೆ ಅವನ ಮನಸ್ಸು ಸಂಪೂರ್ಣವಾಗಿ ರಾಧೆಯಲ್ಲಿಯೇ ಇತ್ತು. ಅವರಿಬ್ಬರೂ ಶಾರೀರಿಕವಾಗಿ ದೂರಾಗಿದ್ದರೂ ಮಾನಸಿಕವಾಗಿ ಹತ್ತಿರವಾಗಿದ್ದರು. ರಾಧೆ ಒಂದಿನ ಹಾಲು ಕಾಯಿಸುವಾಗ ಕೈಜಾರಿ ಹಾಲನ್ನು ತನ್ನ ಕಾಲ ಮೇಲೆ ಸುರಿದುಕೊಂಡಳು. ಆದರೆ ಅವಳ ಬದಲಾಗಿ ಶ್ರೀಕೃಷ್ಣನ ಕಾಲ ಮೇಲೆ ಬೊಬ್ಬೆಗಳಾದವು. ಈ ಘಟನೆ ಸಾಕು ಅವರ ಪವಿತ್ರ ಪ್ರೇಮವನ್ನು ಅರಿಯಲು. ಅವರಿಬ್ಬರೂ ಆತ್ಮ ಸಂಗಾತಿಗಳಾಗಿದ್ದರು.

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

           ರಾಧೆ ಎಷ್ಟು ಕಾದರೂ ಶ್ರೀಕೃಷ್ಣ ಬ್ರಂದಾವನಕ್ಕೆ ಬರಲೇ ಇಲ್ಲ. ಕೊನೆಗೆ ಮುದುಕಿಯಾದ ಮೇಲೆ ರಾಧೆ ಅವನನ್ನು ಹುಡುಕಿಕೊಂಡು ದ್ವಾರಕೆಗೆ ಬಂದಳು. ಕೊನೆಯ ಸಾರಿ ಶ್ರೀಕೃಷ್ಣನನ್ನು ಕಣ್ತುಂಬಿಕೊಂಡಳು. ಕೊನೆಯ ಸಲ ಕೃಷ್ಣ ಅವಳಿಗಾಗಿ ಅವಳಿಷ್ಟದ ಕೊಳಲ ರಾಗವನ್ನು ನುಡಿಸಿ ತನ್ನ ಕೊಳಲನ್ನು ಮುರಿದು ಬೀಸಾಕಿದನು. ಅವನ ಕೊಳಲು ನಾದಕ್ಕೆ ನಾಲ್ಕು ಹೆಜ್ಜೆಗಳನ್ನು ಹಾಕಿ ನಗುನಗುತ್ತಾ ರಾಧೆ ಪ್ರಾಣ ಬಿಟ್ಟಳು.

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

                    "ಪ್ರೀತಿ ಎನ್ನುವುದು ಮನಸ್ಸುಗಳ ಮಾತೇ ಹೊರತು ಮೈಗಳ ಮಾತಲ್ಲ. ಪ್ರೀತಿಸಿದರೆ ಮದುವೆಯಾಗಬೇಕು ಇಲ್ಲವೇ ಸದಾ ಮೈಗಂಟಿಕೊಂಡಿರಬೇಕು ಎಂಬ ನಿಯಮವೇನಿಲ್ಲ. ಪ್ರೀತಿ ಎರಡು ಆತ್ಮಗಳ ಅನ್ಯೋನ್ಯತೆ. ಎರಡು ದೇಹಗಳು ಒಂದೇ ಆತ್ಮದಲ್ಲಿರುವುದೇ ನಿಜವಾದ ಪ್ರೀತಿ..." ಎಂಬುದನ್ನು ರಾಧೆ ನಮಗೆ ಕಲಿಸಿ ಕೊಟ್ಟಿದ್ದಾಳೆ. ದೈಹಿಕ ಸಂಬಂಧ ಬೆಳೆಸದೆ, ಸದಾ ಜೊತೆಗಿರದೆ ಮಾನಸಿಕವಾಗಿ ಪ್ರೀತಿಸಿ ಜಗತ್ತಿಗೆ ನಿಜವಾದ ಪ್ರೀತಿಯೆಂದರೆ ಏನು ಎಂಬುದನ್ನು ತೋರಿಸಿದ ರಾಧೆ ಸೂರ್ಯ ಚಂದ್ರರಿರುವರೆಗೂ ಅಜರಾಮರಳು. ಅವಳ ಪ್ರೇಮಕಥೆಯಿಂದ ಇವತ್ತಿನ ಪ್ರೇಮಿಗಳು ಕಲಿಯುವುದು ಸಾಕಷ್ಟಿದೆ. ಈ ಪ್ರೇಮಕಥೆಯ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ತಿಳಿಸಿ ಮತ್ತು ಇದನ್ನು ನಿಮ್ಮ ಪ್ರೀತಿಪಾತ್ರರೊಡನೆ ಶೇರ್ ಮಾಡಿ...

ಕನ್ನಡ ಕಥೆ ಪುಸ್ತಕಗಳು - Kannada Story Books

ರಾಧೆ ಮತ್ತು ಕೃಷ್ಣನ ಪ್ರೇಮಕಥೆ : Love Story of Radha Krishna in Kannada

2) ಲೈಲಾ ಮಜನು ಪ್ರೇಮಕಥೆ - Love Story of Laila and Majnu in Kannada 

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

                            ಪ್ರೀತಿಯೊಂದು ಸುಂದರ ಭಾವನೆ. ಮರೆಯಲಾಗದ ಮಧುರ ಅನುಭವ. ಎಲ್ಲರೂ ಪ್ರೇಮಕಥೆಗಳನ್ನು ಪ್ರೀತಿಸುತ್ತಾರೆ. ಆದರೆ ಗೆದ್ದ ಪ್ರೀತಿಗಿಂತ ಬಿದ್ದ ಪ್ರೀತಿಯೇ ಹೆಚ್ಚಿಗೆ ಪ್ರಖ್ಯಾತಿಯನ್ನು ಪಡೆಯುತ್ತದೆ. ಅಂಥದ್ದೇ ಬಿದ್ದು ಪ್ರಖ್ಯಾತಿ ಪಡೆದ ಪ್ರೇಮಕಥೆಗಳ ಗುಂಪಿಗೆ ಲೈಲಾ ಮಜನು ಪ್ರೇಮಕಥೆ ಸೇರಿಕೊಳ್ಳುತ್ತದೆ. ಲೈಲಾ ಮಜನುರದ್ದು ಒಂದು ಮಹಾನ್ ಹುಚ್ಚು ಪ್ರೇಮಕಥೆ.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

      ಸುಮಾರು 7ನೇ ಶತಮಾನದಲ್ಲಿ ಉತ್ತರ ಅರೇಬಿಯಾದ ಪೆನ್ಸಿಲೆನಿಯಾ ಎಂಬಲ್ಲಿ 'ಕಯಾಸ್ ಇಬ್ನ್ ಅಲ್ - ಮುಲ್ವಾಹಲ್' ಎಂಬ ನವ ತರುಣನಿದ್ದನು. ಆತ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವನ ಮನಸ್ಸು ಹಾಗೂ ಮೆದುಳು ಎರಡೂ ಪರಿಪೂರ್ಣವಾಗಿ ಪಕ್ವವಾಗಿದ್ದವು. ಅವನಿಗೆ ಬದುಕು ಹೆಜ್ಜೆ ಹೆಜ್ಜೆಗೂ ಪಾಠ ಕಲಿಸಿರುವುದರಿಂದ ಆತ ಅನುಭವದ ಮೂರ್ತಿಯಾಗಿದ್ದನು. ಅವನ ಕಷ್ಟಗಳು ಅವನಿಗೆ ಬದುಕುವುದನ್ನು ಕಲಿಸಿದ್ದವು. ಆದರೆ ಆತ ಕಷ್ಟಗಳನ್ನು ದ್ವೇಷಿಸುತ್ತಿರಲಿಲ್ಲ. ಅದರ ಬದಲಾಗಿ ತನ್ನ ಜೀವನವನ್ನು ಪ್ರೀತಿಸುತ್ತಿದ್ದನು. ಜೀವನದ ಮೇಲಿನ ಪ್ರೀತಿಯಿಂದಾಗಿ ಅವನಲ್ಲೊಂದು ಕವಿ ಹೃದಯ ಜನ್ಮ ತಾಳಿತ್ತು. ಅವನೆದೆಯಿಂದ ಕವನಗಳು ನಿರಂತರವಾಗಿ ಕುಡಿಯೊಡೆಯಲು ಪ್ರಾರಂಭಿಸಿದವು. ಒಂದಿನ ಹೀಗೆಯೇ ಕವನಗಳನ್ನು ಕಟ್ಟುತ್ತಾ ಊರಲ್ಲಿ ಅಲೆಯುತ್ತಿರುವಾಗ ಆತನ ಕಣ್ಣಿಗೆ ಒಬ್ಬಳು ಸುಂದರವಾದ ನವ ತರುಣಿ ಬಿದ್ದಳು. ಅವಳೇ 'ಲೈಲಾ ಅಲ್ ಅಮಿರಿಯಾ'. ಲೈಲಾ ಒಂದು ಶ್ರೀಮಂತ ಕುಟುಂಬದ ಕನ್ಯೆಯಾಗಿದ್ದಳು. ಅವಳ ತಂದೆ ಅವಳನ್ನು ರಾಜಕುಮಾರಿಯಂತೆ ಬೆಳೆಸಿದ್ದರು. ಅವಳ ಮೇಲೆ ಕಯಾಸನಿಗೆ ಮನಸ್ಸಾಯಿತು. ಆತ ಅವಳನ್ನು ಕಂಡ ಕ್ಷಣದಿಂದಲೇ ಪ್ರೀತಿಸಲು ಪ್ರಾರಂಭಿಸಿದನು. ಬೀದಿ ಭೀಕಾರಿಯಂತಿದ್ದ ಕಯಾಸನಿಗೂ ರಾಜಕುಮಾರಿಯಂತಿದ್ದ ಲೈಲಾಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೂ ಕಯಾಸ ಅವಳನ್ನು ಹುಚ್ಚನಂತೆ ಪ್ರೀತಿಸಲು ಪ್ರಾರಂಭಿಸಿದನು.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

                     ಕಯಾಸ ತನ್ನ ಕನಸುಗಳ ಲೋಕದಲ್ಲಿ ಲೈಲಾಳನ್ನು ಕಲ್ಪಿಸಿಕೊಂಡು ಪ್ರೇಮ ಕವನಗಳನ್ನು ಬರೆಯಲು ಪ್ರಾರಂಭಿಸಿದನು. ಅವನ ಪ್ರೇಮಕವನಗಳಲ್ಲಿ ಲೈಲಾಳ ಹೆಸರು ಹಾಗೂ ಸೌಂದರ್ಯ ಪದೇಪದೇ ಸದ್ದು ಮಾಡತೊಡಗಿತು. ಅವನ ಪ್ರೇಮ ಕವನಗಳು ಪ್ರೇಮ ಬಾಣಗಳಂತೆ ಲೈಲಾಳ ಹೃದಯಕ್ಕೆ ತಾಕಿದವು. ಆಕೆ ಅವನ ಕವನಗಳನ್ನು ಮೆಚ್ಚಿ ಪ್ರೇಮಕವಿ ಕಯಾಸನನ್ನು ಪ್ರೀತಿಸಲು ಪ್ರಾರಂಭಿಸಿದಳು. ಅವನ ಪ್ರೇಮ ಕವನಗಳಿಂದಾಗಿ ಅವನ ಪ್ರೇಮಕಥೆ ಊರಲೆಲ್ಲ ಫೇಮಸ್ ಆಯ್ತು. ಅವನು ಹುಚ್ಚನಂತೆ ಲೈಲಾಳನ್ನು ಪ್ರೀತಿಸುವುದನ್ನು ಕಂಡ ಊರ ಜನ ಅವನನ್ನು ಲೈಲಾ ಮಜನು ಎಂದು ಕರೆಯತೊಡಗಿದರು. ಲೈಲಾ ಮಜನು ಎಂದರೆ ಲೈಲಾಳಿಂದ ಹುಚ್ಚನಾದವ ಎಂದರ್ಥ. ಅವನ ಗೆಳೆಯರು ಸಹ ಅವನನ್ನು ಲೈಲಾ ಮಜನು ಎಂದು ಕರೆದು ಅವನನ್ನು ಛೇಡಿಸಿದರು. ಆದರೆ ಆತ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪ್ರೇಮ ಕವನಗಳಲ್ಲಿ ಲೈಲಾಳನ್ನು ಆರಾಧಿಸಿದನು.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

                ಪ್ರೇಮ ಕವನಗಳ ನೆರಳಿನಲ್ಲಿ ಲೈಲಾ ಮತ್ತು ಕಯಾಸನ ಪ್ರೇಮಕಥೆ ಸಾಗಿತ್ತು. ಆದರೆ ಕಯಾಸ್ ಆತುರದಲ್ಲಿ ಲೈಲಾಳ ತಂದೆಗೆ "ಲೈಲಾಳನ್ನು ಕೊಟ್ಟು ಮದುವೆ ಮಾಡುವಿರಾ...?" ಎಂದು ಕೇಳಿ ದುಡುಕಿದನು. ಲೈಲಾಳ ತಂದೆ ಲೈಲಾಳನ್ನು ಕಯಾಸನಿಗೆ ಕೊಟ್ಟು ಮದುವೆ ಮಾಡಲು ಒಂಚೂರು ಒಪ್ಪಲಿಲ್ಲ. ಏಕೆಂದರೆ ಅವರ ಕಣ್ಣಲ್ಲಿ ಕಯಾಸ್ ಬರೀ ಕವನಗಳನ್ನು ಬರೆಯುತ್ತಾ ಕೆಲಸವಿಲ್ಲದೆ ಬೀದಿಬೀದಿ ಅಲೆಯುವ ಬೀದಿ ಭೀಕಾರಿಯಾಗಿದ್ದನು. ಅಂತಸ್ತಿನಲ್ಲಿ ಆತ ಅತ್ಯಂತ ಕೆಳಗಿರುವುದರಿಂದ ಹಾಗೂ ಅವನಿಗೆ ಯಾವುದೇ ಕೆಲಸ ಇರದಿರುವುದರಿಂದ ಲೈಲಾಳ ತಂದೆ ಅವನನ್ನು "ಕೆಲಸವಿಲ್ಲದೆ ಅಲೆಯುವ ನಿನ್ನ ಕವಿತೆಗಳಿಂದ ನನ್ನ ಮಗಳ ಹೊಟ್ಟೆ ತುಂಬಲ್ಲ..." ಎಂದು ಬೈದು ಬುದ್ಧಿವಾದ ಹೇಳಿ ಕಳುಹಿಸಿದರು. "ರಾಜಕುಮಾರಿಯಂತೆ ಸಾಕಿದ ಮಗಳನ್ನು ಬಡವರ ಮನೆಗೆ ಧಾರೆಯೆರೆದು ಕೊಡಲು ಯಾವ ತಂದೆಯು ಒಪ್ಪಲ್ಲ. ಕಯಾಸನ ಪ್ರೇಮ ಕವನಗಳು ತಂದೆಯ ದೃಷ್ಟಿಯಲ್ಲಿ ಪ್ರಯೋಜನಕ್ಕೆ ಬರಲ್ಲ..." ಎಂಬುದು ಗೊತ್ತಾದಾಗ ಲೈಲಾ ಊಟ ನೀರನ್ನು ಬಿಟ್ಟು ಮನೆಯಲ್ಲಿ ಮೌನ ಚಳುವಳಿಯನ್ನು ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ಬಲವಂತವಾಗಿ ಅವಳ ಮದುವೆಯನ್ನು 'ವರದ ಅಲ್ತಾಫಿ' ಎಂಬ ಶ್ರೀಮಂತ ವ್ಯಾಪಾರಿಯೊಡನೆ ಸದ್ದಿಲ್ಲದೆ ಮಾಡಿದರು. ಆಕೆ ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಮನೆ ಸೇರಿ ಕಣ್ಣೀರಲ್ಲಿ ಕೈ ತೊಳೆಯತೊಡಗಿದಳು. ಅವಳ ಗಂಡನಿಗೆ ಅವಳ ಪ್ರೇಮಕಥೆ ಗೊತ್ತಾದಾಗ ಆತ ಅವಳೊಂದಿಗೆ ಶಾರೀರಿಕ ಸಂಬಂಧವನ್ನು ಬೆಳೆಸದೆ ಅಸಲಿ ಪುರುಷನೆನೆಸಿಕೊಂಡನು.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

                       ಜಾತಿ ಒಂದೇ ಆದರೂ ಅಂತಸ್ತಿನ ಅಸಮಾನತೆಯಿಂದಾಗಿ ಕಯಾಸನ ಪ್ರೀತಿ ಲೈಲಾಳ ಬಲವಂತದ ಮದುವೆಯಲ್ಲಿ ಸದ್ದಿಲ್ಲದೆ ಬಲಿಯಾಯಿತು. ಯಾವಾಗ ಲೈಲಾಳ ಮದುವೆಯ ಸುದ್ದಿ ಕಯಾಸನ ಕಿವಿಗೆ ಬಿತ್ತೋ ಆಗವನ ಮನಸ್ಸು ಮುರಿದು ನೂಚ್ಚು ನೂರಾಯಿತು. ಆತ ನಿಂತ ಜಾಗದಲ್ಲಿಯೇ ಕುಸಿದು ಬಿದ್ದನು. ಆತ ಸುಧಾರಿಸಿಕೊಂಡ ನಂತರ ಊರ ಬಿಟ್ಟು ಸಮೀಪದ ಮರಭೂಮಿಯಲ್ಲಿ ಲೈಲಾಳನ್ನು ಹುಡುಕುತ್ತಾ ಅಲೆಯಲು ಶುರುಮಾಡಿದನು. ಅವನಿಗೆ ಲೈಲಾ ಎಲ್ಲಿದ್ದಾಳೆ ಎಂಬುದೇ ಗೊತ್ತಿರಲಿಲ್ಲ. ಆದರೂ ಆತ ಅವಳನ್ನು ದಿಕ್ಕು ದೆಸೆಯಿಲ್ಲದೆ ಹುಡುಕುತ್ತಾ ಹೊರಟನು. ಅವನ ಮನೆಯವರು ಅವನನ್ನು ಎಲ್ಲೆಡೆಗೆ ಹುಡುಕಾಡಿ ಸುಸ್ತಾದರು. ಅವನಿನ್ನೂ ಮರಳಿ ಬರಲ್ಲವೆಂದು ಅವನ ಶ್ರಾದ್ಧ ಆಚರಿಸಿದರು. ಆದರೆ ಕಯಾಸ ಕಂಡಕಂಡ ಕಲ್ಲುಗಳ ಮೇಲೆ ಮತ್ತು ಮರಭೂಮಿಯ ಮರಳಿನಲ್ಲಿ ಕೋಲಿನಿಂದ ಕವಿತೆಗಳನ್ನು ಬರೆಯುತ್ತಾ, ಲೈಲಾಳನ್ನು ಹುಡುಕುತ್ತಾ ಹಾಗೆಯೇ ಗೊತ್ತು ಗುರಿಯಿಲ್ಲದೆ ಮುಂದೆ ಸಾಗಿದನು.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

              ಲೈಲಾಳ ಹುಡುಕಾಟದಲ್ಲಿ ಅಲೆದು ಕಯಾಸ ವಿಶಾಲವಾದ ಮರಭೂಮಿ ಪಾಲಾದನು. ಲೈಲಾ ಕೂಡ ಅವನ ನೆನಪುಗಳಲ್ಲಿ ನರಳಿ ತನ್ನ ಕೊನೆಯ ದಿನಗಳನ್ನು ಹತ್ತಿರವಾಗಿಸಿಕೊಂಡಳು. ಕಯಾಸನಿಂದ ದೂರಾಗಿ ದೂರದ ಗಂಡನ ಮನೆಗೆ ಬಂದಾಗ ಲೈಲಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿದು ಹಾಸಿಗೆ ಹಿಡಿದಳು. ಅವಳ ಮನೋ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ ಅವಳ ಗಂಡ ಅವಳನ್ನು ಇರಾಕಗೆ ಕರೆದುಕೊಂಡು ಹೋದನು. ಆದರೆ ಅವಳ ಮನೋರೋಗ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಯಿತು. ಕೊನೆಗಾಕೆ ಕಯಾಸನ ನೆನಪುಗಳ ನೋವನ್ನು ತಾಳಲಾರದೇ ಎದೆಯೊಡೆದುಕೊಂಡು ಪ್ರಾಣ ತ್ಯಾಗ ಮಾಡಿದಳು.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

                      ಲೈಲಾಳ ಅಕಾಲಿಕ ಸಾವಿನ ಸುದ್ದಿ ಅವಳೂರಿಗೆ ತಲುಪಿದಾಗ ಕಯಾಸನ ಗೆಳೆಯರು ಅವನಿಗಾಗಿ ಬಹಳಷ್ಟು ಹುಡುಕಾಡಿದರು. ಆದರೆ ಆತ ಅವರಿಗೆ ಸಿಗಲಿಲ್ಲ. ಕೆಲವು ದಿನಗಳು ಕಳೆದ ನಂತರ ಅವನ ಮೃತ ಶರೀರ ಲೈಲಾಳ ಗೋರಿಯ ಪಕ್ಕದಲ್ಲಿ ಕಂಡು ಬಂದಿತು. ಆತ ಅವಳನ್ನು ಹುಡುಕಿಕೊಂಡು ಇರಾಕಿಗೆ ಬರುವಷ್ಟರಲ್ಲಿ ಅವಳು ಗೋರಿ ಸೇರಿದ್ದಳು. ಅದನ್ನು ತಿಳಿದ ಕಯಾಸ ಅವಳ ಗೋರಿ ಪಕ್ಕದಲ್ಲಿದ್ದ ಕಲ್ಲುಗಳ ಮೇಲೆ ಅವಳಿಗಾಗಿ ಮೂರು ಸಾಲಿನ ಪ್ರೇಮ ಕವನವೊಂದನ್ನು ಬರೆದು ಕಣ್ಮುಚ್ಚಿದ್ದನು.

ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada

                          ಕಯಾಸ ಲೈಲಾಳನ್ನು ಪ್ರೀತಿಸುತ್ತಾ ಹುಚ್ಚನಾಗಿ ಊರ ಜನರಿಂದ ಲೈಲಾಮಜನು ಎಂಬ ಬಿರುದನ್ನು ಪಡೆದುಕೊಂಡರೂ ಅವಳೊಂದಿಗೆ ಬಾಳಿ ಬದುಕಲಾರದೆ ದುರಂತ ಸಾವಿಗೆ ಶರಣಾದನು. ಪ್ರೇಮ ಕವನಗಳೇ ಅವನ ಆಸ್ತಿಯಾಗಿದ್ದವು. ಲೈಲಾಳ ಕಣ್ಣಿಗೆ ಅಮೂಲ್ಯವಾಗಿ ಕಂಡ ಅವನ ಪ್ರೇಮ ಕವನಗಳು ಅವಳ ತಂದೆಯ ಕಣ್ಣಿಗೆ ಕೇವಲವಾಗಿ ಕಂಡವು. ಒಂದು ವೇಳೆ ಲೈಲಾಳಿಗೆ ಅಮೂಲ್ಯವಾಗಿ ಕಂಡ ಕಯಾಸನ ಕವನಗಳು ಅವಳ ತಂದೆಗೂ ಅಮೂಲ್ಯವಾಗಿ ಕಂಡಿದ್ದರೆ ಆತನಿಗೆ ಲೈಲಾ ಸಿಗುತ್ತಿದ್ದಳು. ಆತ ಕೊನೆಯ ಸಲ ಲೈಲಾಳಿಗಾಗಿ ಅವಳ ಗೋರಿಯ ಕಲ್ಲುಗಳ ಮೇಲೆ ಬರೆದ "ಲೈಲಾ ಹಾದು ಹೋದ ಈ ಗೋಡೆಗಳ ಮೂಲಕ ನಾನು ಹಾದು ಹೋಗುತ್ತೇನೆ. ಲೈಲಾ ಚುಂಬಿಸಿದ ಈ ಗೋಡೆಗಳನ್ನು ನಾನು ಚುಂಬಿಸುತ್ತೇನೆ. ಇದು ಗೋಡೆಗಳ ಮೇಲಿರುವ ಪ್ರೇಮವಲ್ಲ. ಆ ಗೋಡೆಗಳ ಮಧ್ಯೆ ಮಲಗಿರುವ ಲೈಲಾಳ ಮೇಲಿರುವ ಪ್ರೇಮ" ಎಂಬ ಕವನ ನನ್ನನ್ನು ಇಂದಿಗೂ ಕಾಡುತ್ತದೆ. ಇದಿಷ್ಟು ಲೈಲಾ ಮಜುನುವಿನ ಪ್ರೇಮಕಥೆ. ಈ ಪ್ರೇಮಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಮೆಂಟ್ ಮಾಡಿ.

Note : This love story is inspired by Love poems written by Persian poet Nizami Ganjavi.


ಲೈಲಾ ಮಜನು ಪ್ರೇಮಕಥೆ : Love Story of Laila Majnu in Kannada


3) ದೇವದಾಸನ ಪ್ರೇಮಕಥೆ - Love Story of Devadas and Paru in Kannada 

ದೇವದಾಸನ ಪ್ರೇಮಕಥೆ : Love Story of Devadas and Paru in Kannada

         ಪ್ರೇಮಿಗಳಿಗೆ ದೇವದಾಸನ ಹೆಸರು ಗೊತ್ತಿರದೆ ಇರಬಹುದು. ಆದರೆ ವಿರಹಿಗಳಿಗೆ ದೇವದಾಸನ ಹೆಸರು ಖಂಡಿತ ಗೊತ್ತಿರುತ್ತದೆ. ಹೃದಯ ಮುರಿದವರೆಲ್ಲ ದೇವದಾಸರೆ ಎಂಬ ಮಾತಿದೆ. ಎಲ್ಲರ ಮನ ಮುಟ್ಟಿದ ದೇವದಾಸನದ್ದು ನಿಜವಾದ ಪ್ರೇಮಕಥೆಯಲ್ಲ. ಅವನದ್ದು ಶರತ ಚಂದ್ರ ಚಟರ್ಜಿಯವರು 1900ರಲ್ಲಿ ಬೆಂಗಾಲಿಯಲ್ಲಿ ಬರೆದ ಕಾಲ್ಪನಿಕ ಪ್ರೇಮಕಥೆ. ದೇವದಾಸನ ಪ್ರೇಮಕಥೆ ಎಲ್ಲರ ಮನ ಕಲುಕಿದೆ. ಏಕೆಂದರೆ ಅದು ಸುಮಾರು 19 ಸಲ ವಿಭಿನ್ನ ಭಾಷೆಯ ಸಿನೆಮಾ ತೆರೆಯ ಮೇಲೆ ಮೂಡಿ ಬಂದಿದೆ. ದೇವದಾಸನ ಪ್ರೇಮಕಥೆ ಇಂತಿದೆ.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                             ಕಲ್ಕತ್ತಾ ಸಮೀಪದ ತಾಳಶೋನಪುರ ಎಂಬ ಹಳ್ಳಿಯಲ್ಲಿನ ಅಗರ್ಭ ಶ್ರೀಮಂತ ಬೆಂಗಾಲಿ ಬ್ರಾಹ್ಮಣ ಕುಟುಂಬದಲ್ಲಿ ದೇವದಾಸನ ಜನನವಾಯಿತು. ಅವನ ಗೆಳತಿಯೇ ಪಾರ್ವತಿ. ಎಲ್ಲರೂ ಅವಳನ್ನು ಪ್ರೀತಿಯಿಂದ ಪಾರು ಎಂದು ಕರೆಯುತ್ತಿದ್ದರು. ಅವಳು ದೇವದಾಸನ ಎದುರಿನ ಮನೆಯವಳು. ದೇವದಾಸ ಶ್ರೀಮಂತ ಬೆಂಗಾಲಿ ಬ್ರಾಹ್ಮಣ ಪರಿವಾರದ ವಂಶೋಧ್ಧಾರಕನಾಗಿದ್ದನು. ಆದರೆ ಅವನ ಬಾಲ್ಯದ ಗೆಳತಿ ಪಾರು ಒಂದು ಮಿಡಲ್ ಕ್ಲಾಸ್ ವ್ಯಾಪಾರಿ ಕುಟುಂಬದ ಮುದ್ದಿನ ಮಗಳಾಗಿದ್ದಳು. ಜಾತಿ ಅಂತಸ್ತನ್ನು ಮೀರಿ ಅವರಿಬ್ಬರ ಗೆಳೆತನ ಘಾಡವಾಗಿ ಬೆಳೆದಿತ್ತು. ಅವರಿಬ್ಬರ ಕುಟುಂಬಗಳ ಮಧ್ಯೆಯೂ ಒಂದು ಅನ್ಯೋನ್ಯತೆ ಇತ್ತು. ದೇವದಾಸನ ತಾಯಿ ಪಾರುವನ್ನು ಅತ್ಯಂತ ಇಷ್ಟಪಡುತ್ತಿದ್ದಳು. ಪಾರು ತನ್ನ ಹೆಚ್ಚಿನ ಸಮಯವನ್ನು ದೇವದಾಸನೊಂದಿಗೆ ಅವನ ಮನೆಯಲ್ಲಿಯೇ ಕಳೆಯುತ್ತಿದ್ದಳು. ದೇವದಾಸ ಅವಳೊಂದಿಗೆ ತುಂಟಾಟ ಆಡುತ್ತಾ ಅವಳನ್ನು ರೇಗಿಸುತ್ತಿದ್ದನು. ಈ ರೀತಿ ಬಾಲ್ಯದಲ್ಲಿಯೇ ದೇವದಾಸ ಹಾಗೂ ಪಾರುವಿನ ಮಧ್ಯೆ ಒಂದು ಮುರಿಯಲಾಗದ ಬೇಸುಗೆ ಬೆಳೆಯಿತು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

           ದೇವದಾಸ ಹಾಗೂ ಪಾರು ಇಬ್ಬರು ಒಬ್ಬರನ್ನೊಬ್ಬರನ್ನು ಬಿಟ್ಟಿರುತ್ತಿರಲಿಲ್ಲ. ಆದರೆ ಸಂದರ್ಭ ಅವರನ್ನು ಬೇರ್ಪಡಿಸಿತು. ದೇವದಾಸ ತನ್ನ ತಂದೆಯ ಒತ್ತಾಯದ ಮೇರೆಗೆ ಶಿಕ್ಷಣವನ್ನು ಪಡೆಯುವುದಕ್ಕಾಗಿ ಕಲ್ಕತ್ತಾಗೆ ತೆರಳಿದನು. ಆತ 13 ವರ್ಷಗಳ ಕಾಲ ಓದಿಗಾಗಿ ಅಲ್ಲಿಯೇ ಉಳಿದನು. ಪಾರು ದೇವದಾಸನಿಗಾಗಿ ಪ್ರತಿಕ್ಷಣ ಪರಿತಪಿಸುತ್ತಿದ್ದಳು. ಅವನ ನೆನಪಲ್ಲಿ ಉಸಿರಾಡುತ್ತಿದ್ದಳು. ಅವನು ಸಹ ಅವಳನ್ನು ಪತ್ರಗಳ ಮುಖಾಂತರ ನೆನಪಿಸಿಕೊಳ್ಳುತ್ತಿದ್ದನು. ಶಾರೀರಿಕವಾಗಿ ದೂರಾದರೂ ಮಾನಸಿಕವಾಗಿ ಅವರಿಬ್ಬರು ಹತ್ತಿರವಾಗುತ್ತಲೇ ಹೋದರು. ದೇವದಾಸ 13 ವರ್ಷಗಳ ನಂತರ ತನ್ನ ಓದನ್ನು ಮುಗಿಸಿ ಮರಳಿ ಹಳ್ಳಿಗೆ ಬಂದಾಗ ಅವನು ಸಂಪೂರ್ಣವಾಗಿ ಬದಲಾಗಿದ್ದನು. ಚಿಕ್ಕವನಿದ್ದಾಗ ಪೆದ್ದನಂತಾಡುತ್ತಿದ್ದ ಹುಡುಗ ಈಗ ಒಬ್ಬ ಸುಶಿಕ್ಷಿತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದನು. ಅದೇ ರೀತಿ ಪಾರು ಕೂಡ ಸಾಕಷ್ಟು ಬದಲಾಗಿದ್ದಳು. 

ದೇವದಾಸನ ಪ್ರೇಮಕಥೆ : Love Story of Devadas and Paru in Kannada

      ಎಷ್ಟೋ ವರ್ಷಗಳ ನಂತರ ದೇವದಾಸ ತನ್ನ ಪಾರುವನ್ನು ನೋಡಿದಾಗ ಆತ ಅಚ್ಚರಿಗೆ ಒಳಗಾದನು. ಏಕೆಂದರೆ ಅವನ ಬಾಲ್ಯದ ಸ್ನೇಹಿತೆ ಪಾರು ಈಗ ಸಾಕಷ್ಟು ಬದಲಾಗಿದ್ದಳು. ಬಾಲ್ಯದಲ್ಲಿ ಅವನೊಂದಿಗೆ ಯಾವುದೇ ಮುಜುಗುರ, ಹಿಂಜರಿಕೆ, ನಾಚಿಕೆಯಿಲ್ಲದೆ ತುಂಟಾಟವಾಡುತ್ತಿದ್ದ ಪಾರು ಈಗ ಎದೆಯೆತ್ತರಕ್ಕೆ ಬೆಳೆದು ನಿಂತ ಸುಂದರ ಯುವತಿಯಾಗಿದ್ದಳು. ಅವಳ ಸೌಂದರ್ಯವನ್ನು ಕಂಡಾಕ್ಷಣ ದೇವದಾಸ ತನ್ನನ್ನು ತಾನು ನಂಬದಾದನು. ಅವರಿಬ್ಬರೂ ಪರಸ್ಪರ ಅಪ್ಪಿಕೊಂಡರು. ಏಕಾಂತದಲ್ಲಿ ತಮ್ಮ ಯೋಗಕ್ಷೇಮ ವಿಚಾರಿಸಿಕೊಂಡರು. ಈಗವರಿಗೆ "ತಾವಿಬ್ಬರು ಬರೀ ಸ್ನೇಹಿತರಾಗಿ ಉಳಿದಿಲ್ಲ, ಯುವ ಪ್ರೇಮಿಗಳಾಗಿದ್ದೇವೆ..." ಎಂಬುದು ಅರಿವಾಯಿತು. ತನ್ನ ಬಾಲ್ಯದ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿರುವುದರಿಂದ ಪಾರು ಪ್ರಪಂಚವನ್ನೇ ಗೆದ್ದ ಖುಷಿಯಲ್ಲಿದ್ದಳು. ಅದೇ ರೀತಿ ದೇವದಾಸ ಕೂಡ ಅಪರೂಪದ ಸುಂದರಿ ತನ್ನ ಸಂಗಾತಿಯಾಗುವಳು ಎಂಬ ಸಂತಸದಲ್ಲಿ ತೇಲಾಡಿದನು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                      ದಿನಗಳು ಕಳೆದಂತೆ ದೇವದಾಸ ಹಾಗೂ ಪಾರುವಿನ ಪ್ರೀತಿ ಒಂದು ಪರದೆಯನ್ನು ದಾಟಿ ಮುಂದೆ ಸಾಗಿತು. ಆಕೆ ಚಿಕ್ಕ ವಯಸ್ಸಿನಂತೆಯೇ ಹೆಚ್ಚಿನ ಸಮಯವನ್ನು ದೇವದಾಸನೊಂದಿಗೆ ಅವನ ಮನೆಯಲ್ಲೇ ಕಳೆಯಲು ಪ್ರಾರಂಭಿಸಿದಳು. ಅವಳು ದೇವದಾಸನ ಕಣ್ಣುಗಳಲ್ಲಿ ತನ್ನ ಮೇಲಿರುವ ಪ್ರೀತಿಯನ್ನು ನೋಡುತ್ತಾ ಲೋಕವನ್ನೇ ಮರೆತು ಬಿಡುತ್ತಿದ್ದಳು. ಅವನ ಜೊತೆ ಕಿತ್ತಾಡುತ್ತಾ, ಕೋಪಿಸಿಕೊಂಡಂತೆ ನಾಟಕವಾಡುತ್ತಾ ತನ್ನನ್ನು ತಾನು ಮರೆತು ಬಿಡುತ್ತಿದ್ದಳು. ದೇವದಾಸ ಅವಳ ಮುದ್ದಾದ ನಗುವಿಗೆ ಮನಸೋತು ಮಗುವಿನಂತೆ ಅವಳನ್ನೇ ನೋಡುತ್ತಾ ಏನೇನೋ ಕಲ್ಪಿಸಿಕೊಳ್ಳುತ್ತಾ ಮೈಮರೆಯುತ್ತಿದ್ದನು. ಅವಳ ಮಡಿಲಲ್ಲಿ ಮಲಗಿಕೊಂಡು ಅವಳ ಸ್ಪರ್ಷಯನ್ನು ಸವಿಯುತ್ತಾ, ಅವಳ ಮುದ್ದಾದ  ಮಾತುಗಳನ್ನು ಕೇಳುತ್ತಾ ನಿದ್ರೆಗೆ ಜಾರುತ್ತಿದ್ದನು. ಅವರಿಬ್ಬರ ಮನೆ ಎದುರು ಬದುರಾಗಿರುವುದರಿಂದ ಅವರಿಬ್ಬರಿಗೂ ಸುಲಭವಾಗಿ ಸಿಗಲು ಸಾಧ್ಯವಾಗುತ್ತಿತ್ತು. ಹೀಗಾಗಿ ಅವರಿಬ್ಬರ ಪ್ರೀತಿ ಸುಸೂತ್ರವಾಗಿ ಮುಂದೆ ಸಾಗಿತ್ತು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                ಯಾರ ಅಡ್ಡಿ ಆತಂಕವಿಲ್ಲದೆ ದೇವದಾಸ ಹಾಗೂ ಪಾರುವಿನ ಪ್ರೀತಿ ರಹಸ್ಯವಾಗಿ ಮುಂದೆ ಸಾಗಿತ್ತು. ಆದರೆ ಅವರ ಪ್ರೀತಿ ಪಾರುವಿನ ತಾಯಿಗೆ ಗೊತ್ತಾಯಿತು. ಅವಳ ತಾಯಿ ಅವಳ ಪ್ರೀತಿಯನ್ನು ಪ್ರೋತ್ಸಾಹಿಸಿದರು. ಏಕೆಂದರೆ ತಮ್ಮ ಮಗಳು ದೇವದಾಸನನ್ನು ಇಷ್ಟಪಡುತ್ತಿದ್ದಾಳೆ ಎಂಬುದು ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಅದಕ್ಕಾಗಿ ಅವರು ಪಾರುವಿನ ಪ್ರೀತಿಗೆ ಪ್ರೋತ್ಸಾಹ ನೀಡಿದರು. ತಡಮಾಡದೆ ತಮ್ಮ ಮಗಳ ಮದುವೆಯನ್ನು ದೇವದಾಸನೊಂದಿಗೆ ನೆರವೇರಿಸಿ ಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸನ್ನು ಕಂಡರು. ಪಾರುವಿನ ತಾಯಿ ಬೆಂಗಾಲಿ ಸಂಪ್ರದಾಯದಂತೆ ದೇವದಾಸನ ತಾಯಿ ಹರಿಮತಿಗೆ ತಮ್ಮ ಮಗಳನ್ನು ನಿಮ್ಮನೆ ಸೊಸೆಯಾಗಿಸಿಕೊಳ್ಳುವಂತೆ ಕೇಳಿಕೊಂಡರು. ದೇವದಾಸ ಹಾಗೂ ಪಾರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದನ್ನು ಹೇಳಿ ಅವರಿಬ್ಬರ ಮದುವೆಯ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ದೇವದಾಸನ ತಾಯಿ ಪಾರುವನ್ನು ತಮ್ಮ ಮನೆ ಸೊಸೆಯಾಗಿಸಿಕೊಳ್ಳಲು ಹಿಂದೇಟು ಹಾಕಿದರು. ಅವರಿಗೆ ತಮಗಿಂತಲೂ ಅಂತಸ್ತಿನಲ್ಲಿ, ಜಾತಿಯಲ್ಲಿ ಕೀಳಾಗಿರುವ ವ್ಯಾಪಾರಿಗಳ ಮನೆ ಮಗಳನ್ನು ತಮ್ಮ ಮನೆ ತುಂಬಿಸಿಕೊಳ್ಳುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅದಕ್ಕಾಗಿ ಅವರು ಪಾರುವಿನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದರು. ಜೊತೆಗೆ ಪಾರುವನ್ನು "ಹೀನ ಕುಲದವಳು, ನಡತೆಗೆಟ್ಟವಳು, ವ್ಯಾಪಾರಿ ವಂಶಸ್ಥಳು" ಎಂದೆಲ್ಲ ಹೀಯಾಳಿಸಿ ಅವಮಾನಿಸಿದರು. ದೇವದಾಸನ ತಂದೆ ನಾರಾಯಣ ಮುಖರ್ಜಿ "ನಮ್ಮ ಅಂತಸ್ತಿಗೆ ತಕ್ಕಷ್ಟು ವರದಕ್ಷಿಣೆಯನ್ನು ಕೊಡುವ ಯೋಗ್ಯತೆ ನಿಮಗಿಲ್ಲ..." ಎಂದು ಅವಮಾನಿಸಿ ಕಳುಹಿಸಿದರು. ಪಾರುವಿನ ತಾಯಿ ಇಂಥ ಉತ್ತರವನ್ನು ದೇವದಾಸನ ಮನೆಯಿಂದ ನಿರೀಕ್ಷಿಸಿರಲಿಲ್ಲ. ಅವಮಾನವಾದ ಕೋಪದಲ್ಲಿ ಪಾರುವಿನ ತಂದೆ ನೀಲಕಂಠ ಚಕ್ರವರ್ತಿಯವರು ಪಾರುವಿಗೆ ಒಂದೊಳ್ಳೆ ಶ್ರೀಮಂತ ವರನನ್ನು ಹುಡುಕಿ ಅವಳ ಮದುವೆಯ ಸಿದ್ಧತೆಗಳನ್ನು ಪ್ರಾರಂಭಿಸಿದರು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                            ತರಾತುರಿಯಲ್ಲಿ ಸಾಗುತ್ತಿರುವ ತನ್ನ ಮದುವೆ ಸಿದ್ಧತೆಗಳನ್ನು ನೋಡಿ ಪಾರು ಗಾಬರಿಯಾದಳು. ಅವಳಿಗೆ ದೇವದಾಸನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗುವ ಮನಸ್ಸಿರಲಿಲ್ಲ. ಆಕೆಗೆ ದೇವದಾಸನ್ನು ಬಿಟ್ಟು ಖುಷಿಯಾಗಿರುವಷ್ಟು ಶಕ್ತಿಯೂ ಇರಲಿಲ್ಲ. ಅದಕ್ಕಾಗಿ ಆಕೆ ಧೈರ್ಯ ಮಾಡಿ ಎಲ್ಲರ ಕಣ್ತಪ್ಪಿಸಿ ಮಧ್ಯ ರಾತ್ರಿ ಎರಡು ಗಂಟೆಗೆ ಗುಟ್ಟಾಗಿ ದೇವದಾಸನನ್ನು ಭೇಟಿಯಾದಳು. ಅವನಿಗೆ ತನ್ನ ಪ್ರೀತಿಯನ್ನು ಮನಮುಟ್ಟುವಂತೆ ಹೇಳಿದಳು. ಆದರೆ ದೇವದಾಸ ಮೌನವಾಗಿದ್ದನು. ಏಕೆಂದರೆ ಅವನಿಗೆ ತನ್ನ ಮನೆಯವರೊಂದಿಗೆ ಮಾತಾಡಿ ತಮ್ಮಿಬ್ಬರ ಮದುವೆಗೆ ಒಪ್ಪಿಗೆ ಪಡೆದುಕೊಳ್ಳುವಷ್ಟು ಧೈರ್ಯವಿರಲಿಲ್ಲ. ಪಾರುವಿನ ಮನೆಯಲ್ಲಿ ಯಾವುದೇ ತಕರಾರುಗಳಿರಲಿಲ್ಲ. ಆದರೆ ದೇವದಾಸನ ಮನೆಯಲ್ಲಿ ಅವರ ಪ್ರೀತಿಗೆ ತೀವ್ರ ವಿರೋಧವಿತ್ತು. ಮನೆಯವರನ್ನು ವಿರೋಧಿಸಿ ಪಾರುವನ್ನು ಮದುವೆಯಾಗುವುಷ್ಟು ಭಂಡು ಧೈರ್ಯ ದೇವದಾಸನ ಎದೆಯಲ್ಲಿರಲಿಲ್ಲ. ಪಾರು ಅವನೊಂದಿಗೆ ಓಡೋಗಿ ಮದುವೆಯಾಗಲು ಸಹ ಸಿದ್ಧಳಿದ್ದಳು. ಆದರೆ ಆತ ಹೆದರು ಪುಕ್ಕಲಾಗಿದ್ದನು. ಆತ ಅವಳನ್ನು ಸಮಾಧಾನ ಮಾಡಿ ಅವಳನ್ನು ಮನೆಗೆ ಕಳುಹಿಸಿದನು. ಮರುದಿನ ತಮ್ಮಿಬ್ಬರ ಮದುವೆಗೆ ತನ್ನ ತಂದೆಯ ಮನವೊಲಿಸಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿ ಸೋತನು. ಅವನ ಮನೆಯವರಿಗೆ ಮಗನ ಖುಷಿಗಿಂತ ಜಾತಿ ಹಾಗೂ ಅಂತಸ್ತಿನ ಅಹಂಕಾರವೇ ಹೆಚ್ಚಾಗಿತ್ತು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                          ತನ್ನ ಮನೆಯವರ ಮನವೊಲಿಸುವಲ್ಲಿ ವಿಫಲನಾದಾಗ ದೇವದಾಸನಿಗೆ ಪಾರುವಿಗೆ ಮುಖ ತೋರಿಸುವ ಧೈರ್ಯವಾಗಲಿಲ್ಲ. ಅದಕ್ಕಾಗಿ ಆತ ಅವಳಿಗೆ ಹೇಳದೆ ಕೇಳದೆ ರಾತ್ರೋರಾತ್ರಿ ಕಲ್ಕತ್ತಾಗೆ ಹಾರಿ ಹೋದನು. ಒಂದೆರಡು ದಿನ ಬಿಟ್ಟು ಅವಳಿಗೆ "ನಮ್ಮ ಮದುವೆಗೆ ನಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅದಕ್ಕಾಗಿ ನಾವಿಬ್ಬರೂ ನಮ್ಮ ಪ್ರೀತಿಯನ್ನು ಮರೆತು ಬರೀ ಸ್ನೇಹಿತರಾಗಿ ಇರೋಣ..." ಎಂದೇಳಿ ಪತ್ರ ಬರೆದನು. ಅವನ ಪತ್ರವನ್ನು ಓದಿ ಪಾರು ಕಂಗಾಲಾದಳು. "ನಾನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ ದೇವದಾಸ ಇಷ್ಟೊಂದು ಹೇಡಿಯೇ?" ಎಂದವಳು ನೊಂದಕೊಂಡಳು. ಅದೇ ನೋವಲ್ಲಿ ಅವಳು ತನ್ನ ತಂದೆ ತೋರಿಸಿದ ಹುಡುಗನೊಂದಿಗೆ ಮದುವೆಯಾಗಲು ಮೌನ ಸಮ್ಮತಿ ಸೂಚಿಸಿದಳು. ಆದರೆ ಅವಳ ಮನಸ್ಸು ದೇವದಾಸನಿಗಾಗಿ ಹಾತೊರೆಯುತ್ತಿತ್ತು. ಅವಳ ಮದುವೆಯ ಸಿದ್ಧತೆಗಳೆಲ್ಲ ಭರದಿಂದ ಸಾಗಿದವು. ಅತ್ತ ಕಡೆ ದೇವದಾಸನಿಗೆ ತಡವಾಗಿ ಜ್ಞಾನೋದಯವಾಯಿತು. ನಾನೀಗ ಸುಮ್ಮನಿದ್ದರೆ ಪಾರುವನ್ನು ಶಾಶ್ವತವಾಗಿ ಕಳೆದುಕೊಳ್ಳುವೆ ಎಂಬ ಭಯ ರಾತ್ರೋರಾತ್ರಿ ಅವನನ್ನು ಮತ್ತೆ ಅವನ ಊರಿಗೆ ಎಳೆದುಕೊಂಡು ಬಂದಿತು. 

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                      ಪಾರುವಿನ ಮದುವೆಯ ಒಂದು ದಿನ ಮುಂಚಿತವಾಗಿ ದೇವದಾಸ ಅವಳನ್ನು ಒಂಟಿಯಾಗಿ ಭೇಟಿಯಾದನು. "ನಾನೀಗ ನಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವೆ. ನಾವಿಬ್ಬರೂ ಓಡೋಗಿ ಮದುವೆಯಾಗೋಣ..." ಎಂದೇಳಿದನು. ಆದರೆ ಅವನ ಮಾತಿಗೆ ಪಾರು ಸೊಪ್ಪಾಕಲಿಲ್ಲ. ದೇವದಾಸನನ್ನು ಮತ್ತೆ ಬಯಸಿ ಅವಳ ತಂದೆತಾಯಿಗಳ ಮಾನವನ್ನು ಹರಾಜಾಕುವ ಕೆಟ್ಟ ಆಸೆ ಅವಳಲ್ಲಿ ಈಗ ಬರಲಿಲ್ಲ. ಅದಕ್ಕಾಗಿ ಆಕೆ ಅವನ ಬೇಜಾವಬ್ದಾರಿತನ ಮತ್ತು ಹೇಡಿತನವನ್ನು ನಿಂದಿಸಿ ಅವನ ಕೋರಿಕೆಯನ್ನು ತಳ್ಳಿ ಹಾಕಿದಳು. ದೇವದಾಸ ತನ್ನನ್ನು ಮದುವೆಯಾಗುವಂತೆ ಪಾರುವನ್ನು ನಾನಾ ರೀತಿಯಲ್ಲಿ ಕೇಳಿಕೊಂಡನು. ಆದರೆ ಅವಳ ಮನಸ್ಸಿಗ ಕಲ್ಲಾಗಿತ್ತು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                      ದೇವದಾಸ ಎಷ್ಟೇ ಬೇಡಿಕೊಂಡರೂ ಪಾರು ಅವನೊಂದಿಗೆ ಮದುವೆಯಾಗಲು ಒಪ್ಪಲಿಲ್ಲ. ಅವಳ ನಿರ್ಧಾರ ಸರಿಯಾಗಿತ್ತು. ಏಕೆಂದರೆ ಮನೆ ಮುಂದೆ ಮದುವೆಯ ದಿಬ್ಬಣ ಬಂದು ನಿಂತಾಗ ಹೇಳದೆ ಕೇಳದೆ ಓಡಿ ಹೋದವನ ಜೊತೆ ಓಡಿ ಹೋಗುವುದು ಸರಿಯಲ್ಲ ಎಂಬುದು ಅವಳಿಗೆ ಚೆನ್ನಾಗಿ ಅರಿವಾಗಿತ್ತು. ಆಕೆ ಅವನಿಂದ "ಸಾಯುವುದರ ಒಳಗೊಮ್ಮೆ ನನ್ನನೊಮ್ಮೆ ನನ್ನ ಮನೆಯಲ್ಲಿ ಬಂದು ನೋಡು..." ಎಂದು ಭಾಷೆ ತೆಗೆದುಕೊಂಡು ಅವನನ್ನು ತರಾಟೆಗೆ ತೆಗೆದುಕೊಂಡು ಮಾತಿನಿಂದ ಚುಚ್ಚಿ ಸಾಯಿಸಿ ಕಳುಹಿಸಿದಳು. ದೇವದಾಸನ ಹೇಡಿತನ ಹಾಗೂ ಅವನ ಮನೆಯವರು ಮಾಡಿದ ಅವಮಾನದ ಸೇಡಿನಿಂದ ಬೇರೆ ಹುಡುಗನೊಂದಿಗೆ ಮದುವೆಯಾಗಿ ಊರು ಬಿಟ್ಟಳು. ಅವಳ ನೆನಪಲ್ಲಿ ಕೊರಗುತ್ತಾ ಮನೆಯವರೊಂದಿಗೆ ಜಗಳವಾಡಿಕೊಂಡು ದೇವದಾಸ ಸಹ ಊರು ಬಿಟ್ಟು ಕಲ್ಕತ್ತಾ ಸೇರಿಕೊಂಡನು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                          ದೇವದಾಸನ ಮೇಲಿನ ಸೇಡಿನಿಂದಾಗಿ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಿ ಆಕೆ ದೊಡ್ಡ ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟಳು. ಏಕೆಂದರೆ ಅವಳ ಗಂಡ ಭುವನ ಚೌದರಿಗೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದರು. ತನಗಿಂತಲೂ ವಯಸ್ಸಿನಲ್ಲಿ ಹನ್ನೆರಡು ವರ್ಷ ದೊಡ್ಡವನಾದ ಅರ್ಧ ಮುದುಕನೊಂದಿಗೆ ಹಾಸಿಗೆ ಹಂಚಿಕೊಂಡು ಸಂಸಾರ ಮಾಡಲು ಆಕೆ ಸಿದ್ಧಳಿದ್ದಳು. ಆದರೆ ಅವಳ ಗಂಡ ಸತ್ತು ಹೋದ ಮೊದಲ ಹೆಂಡತಿಯ ನೆನಪಲ್ಲಿ ನಾಸ್ತಿಕನಾಗಿದ್ದನು. ಆತ ಅವಳ ಸೌಂದರ್ಯದಲ್ಲಿ ಆಸಕ್ತಿ ತೋರಿಸದೇ ಅವಳನ್ನು ಮೂಲೆಗುಂಪು ಮಾಡಿದನು. ಅವಳು ಅವನ ಮಕ್ಕಳ ಸಾಕು ತಾಯಿಯಾಗಷ್ಟೇ ಇರಬೇಕಾಯಿತು. ಅವಳ ಗಂಡ ಜಮೀನುದಾರಿಯನ್ನು ನೋಡಿಕೊಳ್ಳುತ್ತಾ ಅವಳಿಂದ ಬಹುದೂರವೇ ಇರುತ್ತಿದ್ದನು. ಆದರೆ ಆಕೆ ತನ್ನ ಮಾಜಿ ಪ್ರಿಯಕರ ದೇವದಾಸನ ನೆನಪುಗಳಲ್ಲಿ ನರಕಯಾತನೆಯನ್ನು ಅನುಭವಿಸಲು ಪ್ರಾರಂಭಿಸಿದಳು. ದೇವದಾಸನ ನೆನಪುಗಳ ನಿರಂತರ ದಾಳಿಯ ಜೊತೆಗೆ ಹಿಂಸಿಸುವ ಹರೆಯದ ಆಸೆಗಳು ಅವಳನ್ನು ಹಣ್ಣಾಗಿಸಿದನು. ಆಕೆ ಪ್ರೇಮ ವೈರಾಗ್ಯವನ್ನು ಕೊಲ್ಲಲು ಗಂಡನ ತೋಳಿನಾಸರೆಯನ್ನು ಬಯಸಿದಳು. ಆದರೆ ಅವಳಿಗೆ ಅದರ ಬದಲಾಗಿ ಗಂಡನಿಂದಲೂ ವೈರಾಗ್ಯ ಸಿಕ್ಕಾಗ ಆಗ ಮಾನಸಿಕವಾಗಿ ಕುಸಿದು ಬಿದ್ದಳು. ಅವಳ ಗಂಡನ ಸಂಪತ್ತಿನಂತೆ ಅವಳ ಸೌಂದರ್ಯವೂ ಸಹ ನಶ್ವರವಾಯಿತು. ದೇವದಾಸನನ್ನು ಮರೆಯಲಾಗದೆ ಆಕೆ ಮನಶಾಂತಿಗಾಗಿ ಪೂಜಾ ಪಾಠಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕಾಲವನ್ನು ನೂಕತೊಡಗಿದಳು.

ದೇವದಾಸನ ಪ್ರೇಮಕಥೆ : Love Story of Devadas and Paru in Kannada

                                                   ಮನಸ್ಸಿಲ್ಲದ ಮದುವೆಯಾಗಿ ಪಾರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಳು. ಅತ್ತ ಕಡೆ ಕಲ್ಕತ್ತಾದಲ್ಲಿ ದೇವದಾಸ "ತನ್ನ ಹೇಡಿತನದಿಂದಾಗಿ ಮನಸ್ಸಲ್ಲಿರುವವಳನ್ನು ಮದುವೆಯಾಗದೆ ಬೇರೆಯವನಿಗೆ ಬಿಟ್ಟು ಕೊಟ್ಟೆನಲ್ಲ" ಎಂದು ಕೊರಗಲು ಪ್ರಾರಂಭಿಸಿದನು. ಅವನು ಎಷ್ಟೇ ಪ್ರಯತ್ನಿಸಿದರೂ ಪಾರುವಿನ ಗುಂಗಿನಿಂದ ಹೊರಬರಲು ಅವನಿಗೆ ಸಾಧ್ಯವಾಗಲಿಲ್ಲ. ಬೇಡವೆಂದರೂ ಬೆನ್ನಟ್ಟಿ ಬರುವ ಅವಳ ನೆನಪುಗಳಿಂದ ತಪ್ಪಿಸಿಕೊಳ್ಳಲಾಗದೆ ಆತ ಕುಡಿಯಲು ಪ್ರಾರಂಭಿಸಿದನು. ಕುಡಿತದ ಜೊತೆಜೊತೆಗೆ ಸಿಗರೇಟ್ ಸುಂದರಿಯನ್ನು ಸಹ ತುಟಿಗಂಟಿಸಿಕೊಂಡನು. ಇಷ್ಟಾದರೂ ಅವನ ವಿರಹ ಕೊನೆಯಾಗಲಿಲ್ಲ. ಅವನ ಗೆಳೆಯ ಚುನ್ನಿಲಾಲನಿಂದಾಗಿ ಆತ ಚಂದ್ರಮುಖಿ ಎಂಬ ವೈಷ್ಯೆಯ ಸೆರಗಲ್ಲಿ ಸಿಲುಕಿಕೊಂಡನು. ಆತ ಮಿತಿ ಮೀರಿ ಕುಡಿಯುತ್ತಾ, ಲೆಕ್ಕವಿಲ್ಲದಷ್ಟು  ಸಿಗರೇಟಗಳನ್ನು ಸುಡುತ್ತಾ ಚಂದ್ರಮುಖಿಯ ಸೆರಗಿಗೆ ಸುತ್ತಿಕೊಂಡು ಅವಳ ಮನೆಯಲ್ಲಿಯೇ ಬಿದ್ದಿರಲು ಶುರುಮಾಡಿದನು. ಆತ ಚಂದ್ರಮುಖಿಯಲ್ಲಿಯೆ ತನ್ನ ಪಾರುವನ್ನು ಕಾಣಲು ಪ್ರಾರಂಭಿಸಿದನು. 

ದೇವದಾಸನ ಪ್ರೇಮಕಥೆ : Love Story of Devadas and Paru in Kannada

               ದೇವದಾಸ ಚಂದ್ರಮುಖಿಯನ್ನು ಪಾರು ಅಂತ ಭಾವಿಸಿ ಅವಳೊಂದಿಗೆ ಪ್ರೀತಿ ಮಾತುಗಳನ್ನಾಡುವಾಗ ಆಕೆ ಅವನಿಗೆ ಮನಸೋತಳು. ಆಕೆ ಅವನನ್ನು ಪ್ರೀತಿಸತೊಡಗಿದಳು. ಆಕೆ ಅವನ ಮನಸ್ಸಲ್ಲಿರುವ ಪಾರುವನ್ನು ಕಿತ್ತಾಕಿ ತಾನು ಅವನ ಮನಸೇರಲು ಸಾಕಷ್ಟು ಪ್ರಯತ್ನಿಸಿದಳು. ಆದರೆ ಅವನ ಮನಸ್ಸಲ್ಲಿ ಬರೀ ಪಾರುವಿಗೆ ಮಾತ್ರ ಜಾಗವಿತ್ತು. ಆಕೆ ಅವನ ದುಶ್ಚಟಗಳನ್ನು ಬಿಡಿಸಲು ಪ್ರಯತ್ನಿಸಿದಳು. ಆದರೆ ಏನು ಪ್ರಯೋಜನವಾಗಲಿಲ್ಲ. ದೇವದಾಸ ಪಾರುವಿನ ನೆನಪಲ್ಲಿ ಲೆಕ್ಕವಿಲ್ಲದಷ್ಟು ಕುಡಿದು ತನ್ನ ಆರೋಗ್ಯವನ್ನು ಸಂಪೂರ್ಣವಾಗಿ ಹದಗೆಡಿಸಿಕೊಂಡನು. ತಾನಿನ್ನು ಜಾಸ್ತಿ ದಿನ ಬದುಕಲ್ಲ ಎಂಬುದು ಖಾತ್ರಿಯಾದಾಗ ಆತನಿಗೆ ಪಾರುವಿಗೆ ಕೊಟ್ಟ ಮಾತು ನೆನಪಾಯಿತು. ಕೊಟ್ಟ ಮಾತಿನಂತೆ ಕೊನೆಯ ಸಲ ಪಾರುವನ್ನು ನೋಡಲು ಆತ ಅವಳ ಊರಿಗೆ ಹೋದನು. ಆದರೆ ಅವಳನ್ನು ನೋಡಲಾಗದೆ ಅವಳ ಮನೆ ಎದುರಿಗೇನೆ ಪ್ರಾಣ ಬಿಟ್ಟನು. ಅವನ ಸಾವಿನ ಸುದ್ದಿ ಕೇಳಿ ಅವನನ್ನು ನೋಡಲು ಪಾರು ಓಡೋಡಿ ಬರುವಾಗ ಅವಳ ಮನೆಯವರು ಅವಳನ್ನು ತಡೆದರು. ಆಕೆ ಎಷ್ಟೇ ಬೇಡಿಕೊಂಡರೂ ದೇವದಾಸನನ್ನು ನೋಡಲು ಅವಳ ಮನೆಯವರು ಅವಕಾಶ ಮಾಡಿಕೊಡಲಿಲ್ಲ. ಅತಿಯಾಗಿ ಪ್ರೀತಿಸಿ ಆತ ಅವಳ ಮನೆ ಬಾಗಿಲಲ್ಲಿ ಸತ್ತನು. ಸತ್ತ ಪ್ರಿಯಕರನ ಮುಖವನ್ನು  ನೋಡಲಾಗದೆ ಪಾರು ಇದ್ದು ಸತ್ತಂತೆ ಬದುಕಿ ಸತ್ತಳು...

ದೇವದಾಸನ ಪ್ರೇಮಕಥೆ : Love Story of Devadas and Paru in Kannada

     ಈ ದೇವದಾಸನದ್ದು ಕಾಲ್ಪನಿಕ ಕಥೆಯಾದರೂ ಅವನಿನ್ನು ಎಲ್ಲ ವಿರಹಿಗಳ ಉಸಿರಲ್ಲಿ ಹೊಗೆಯಾಗಿಕೊಂಡು ಬದುಕಿದ್ದಾನೆ. ಪ್ರೀತಿಸಿದವಳನ್ನು ಪಡೆದುಕೊಳ್ಳಲಾಗದ ಹೇಡಿ ದೇವದಾಸನಿಗಾಗಿ ಕೊರಗಬೇಕೋ ಅಥವಾ ಸಂದರ್ಭಕ್ಕೆ ಶರಣಾಗಿ ನಾಸ್ತಿಕನನ್ನು ಮದುವೆಯಾಗಿ ನರಕಯಾತನೆಯನ್ನು ಅನುಭವಿಸಿದ ಪ್ರೇಮ ಸುಂದರಿ ಪಾರುಗಾಗಿ ಕೊರಗಬೇಕೋ ಎಂಬುದು ತಿಳಿಯಲ್ಲ. ಇದಿಷ್ಟು ದೇವದಾಸನ ಪ್ರೇಮಕಥೆ. ಇಷ್ಟವಿದ್ದರೆ ಈ ಪ್ರೇಮಕಥೆಯನ್ನು ನಿಮ್ಮ ಮಾಜಿ ಪ್ರೀತಿಪಾತ್ರರೊಡನೆ ಶೇರ್ ಮಾಡಿ ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಮೆಂಟ್ ಮಾಡಿ...


ದೇವದಾಸನ ಪ್ರೇಮಕಥೆ : Love Story of Devadas and Paru in Kannada


4) ಸಲೀಮ ಅನಾರ್ಕಲಿ ಪ್ರೇಮಕಥೆ - Love Story of Devadas and Paru in Kannada 

ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada

                            ಮೊಘಲ ಸಾಮ್ರಾಟ ಅಕ್ಬರನ ಮಗನಾದ ಸಲೀಮ ಬಾಲ್ಯದಲ್ಲಿ ಅತ್ಯಂತ ತುಂಟ ಹಾಗೂ ಹಟಮಾರಿಯಾಗಿದ್ದನು. ಅವನ ಹಟಮಾರಿತನವನ್ನು ಹೋಗಲಾಡಿಸಲು ಅಕ್ಬರ ಅವನನ್ನು ದೂರದ ಸೇನಾ ಶಾಲೆಗೆ ಕಳುಹಿಸಿದನು. ಸಲೀಮ ಸೇನಾ ಶಾಲೆಯಲ್ಲಿ ತನ್ನ ಶಿಕ್ಷಣ ಹಾಗೂ ಶಸ್ತ್ರಾಭ್ಯಾಸವನ್ನು ಪೂರೈಸಿಕೊಂಡು 14 ವರ್ಷಗಳ ನಂತರ ಮರಳಿ ಬಂದನು. ತನ್ನ ಮಗ ಮನೆಗೆ ಬಂದ ಖುಷಿಯಲ್ಲಿ ಅಕ್ಬರ ತನ್ನ ಅರಮನೆಯಲ್ಲಿ ಒಂದು ದೊಡ್ಡ ಮುಜ್ರಾವನ್ನು  (ಸಮಾರಂಭವನ್ನು) ಏರ್ಪಡಿಸಿದನು. ಆ ಸಮಾರಂಭದ ಆಕರ್ಷಣೆಯನ್ನು ಹೆಚ್ಚಿಸುವುದಕ್ಕಾಗಿ ತನ್ನ ನೆಚ್ಚಿನ ನರ್ತಕಿಯಾದ ನದಿರಾಳನ್ನು ಆಹ್ವಾನಿಸಿದನು. ನದಿರಾಳ ನಿಜವಾದ ಹೆಸರು "ಶರಿಫ ಊನ್ ನಿಸ್ಸಾ" ಎಂದಿತ್ತು. ಅವಳ ಸೌಂದರ್ಯ ಹಾಗೂ ನೃತ್ಯ ಕಲೆಯನ್ನು ಮೆಚ್ಚಿ ಜನ ಅವಳಿಗೆ ಅನಾರ್ಕಲಿ ಎಂಬ ಬಿರುದನ್ನು ಕೊಟ್ಟಿದ್ದರು. ಅನಾರ್ಕಲಿ ಎಂದರೆ ಸೌಂದರ್ಯದ ಮೊಗ್ಗು ಎಂದರ್ಥ. ಅನಾರ್ಕಲಿ ಅಕ್ಬರನ ನೆಚ್ಚಿನ ನರ್ತಕಿಯಾಗಿದ್ದಳು. ಹೀಗಾಗಿ ಅಕ್ಬರ ಸಮಾರಂಭದಲ್ಲಿ ಅವಳ ನೃತ್ಯವನ್ನು ಏರ್ಪಡಿಸಿದನು.

ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada

                     ಸಮಾರಂಭದಲ್ಲಿ ಅನಾರ್ಕಲಿಯ ಸೌಂದರ್ಯ ಹಾಗೂ ನೃತ್ಯ ಕಲೆಗಳನ್ನು ನೋಡಿ ಸಲೀಮ ಅವಳ ಮೇಲೆ ಮೋಹಿತನಾದನು. ಆತ ಅವಳನ್ನು ಆಳವಾಗಿ ಪ್ರೀತಿಸಲು ಪ್ರಾರಂಭಿಸಿದನು. ಆದರೆ ಅನಾರ್ಕಲಿ ಅವನಿಂದ ದೂರ ಉಳಿಯಲು ಪ್ರಯತ್ನಿಸಿದಳು. ಏಕೆಂದರೆ ಆಕೆ ಬರೀ ನೃತ್ಯಗಾರ್ತಿಯಾಗಿರಲಿಲ್ಲ. ಅವಳು ನಗರದ ಪ್ರಮುಖ ವೈಷ್ಯ ಸಹ ಆಗಿದ್ದಳು. ಅವಳಿಗೆ ತನ್ನ ಯೋಗ್ಯತೆ ಏನೆಂಬುದು ಚೆನ್ನಾಗಿ ಗೊತ್ತಿತ್ತು. ಅದಕ್ಕಾಗಿ ಆಕೆ ಅವನಿಂದ ದೂರ ಉಳಿಯಲು ಸಾಕಷ್ಟು ಪ್ರಯತ್ನ ಪಟ್ಟಳು. ಆದರೆ ಸಲೀಮ ಅವಳ ಬೆನ್ನು ಬಿಡಲಿಲ್ಲ. ಆತ ಅವಳನ್ನು ಭೇಟಿಯಾಗುವುದಕ್ಕಾಗಿ, ಅವಳೊಂದಿಗೆ ಸೇರುವುದಕ್ಕಾಗಿ ಎಲ್ಲ ಸರ ಹದ್ದುಗಳನ್ನು ಮೀರಿದನು. ಕೊನೆಗೆ ಆಕೆ ಅವನ ಪ್ರೀತಿಗೆ ಶರಣಾದಳು. ಸಲೀಮ ತನ್ನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾ ಸಾಗಿದನು. ಆದರೆ ಅಕ್ಬರನಿಗೆ ಗೊತ್ತಾದರೆ ತನ್ನ ಪ್ರಾಣಕ್ಕೆ ಸಂಚಕಾರ ಬರುವುದೆಂದು ಹೆದರಿ ಅನಾರ್ಕಲಿ ತನ್ನ ಪ್ರೀತಿಯನ್ನು ಬಚ್ಚಿಡುವ ಹರಸಾಹಸ ಮಾಡಿದಳು.

ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada

                                       ಒಂದಿನ ಸಲೀಮ ಅನಾರ್ಕಲಿಯ ಪ್ರೀತಿ ಅಕ್ಬರನ ಕಿವಿಗೆ ತಲುಪಿತು. ತನ್ನ ಮಗ ಸಲೀಮ ವೈಷ್ಯ ಅನಾರ್ಕಲಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ಮಾತನ್ನು ಅವನಿಂದ ಸುಲಭವಾಗಿ ಅರಗಿಸಿಕೊಳ್ಳಲಾಗಲಿಲ್ಲ. ಏಕೆಂದರೆ ಎಲ್ಲರಂತೆ ಅವನು ಸಹ ಅನಾರ್ಕಲಿಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದನು. ಅಕ್ಬರ ಸಲೀಮನನ್ನು ಕರೆದು ಅನಾರ್ಕಲಿಯಿಂದ ದೂರ ಉಳಿಯಲು ಹೇಳಿದನು. ಆದರೆ ಸಲೀಮ ಅವನ ಮಾತನ್ನು ಧಿಕ್ಕರಿಸಿ ಮತ್ತೆ ಗುಟ್ಟಾಗಿ ಅನಾರ್ಕಲಿಯೊಂದಿಗೆ ಸಂಬಂಧ ಬೆಳೆಸಿದನು. ಇದರಿಂದ ಕೆರಳಿದ ಅಕ್ಬರ ಅನಾರ್ಕಲಿಯನ್ನು ಸಲೀಮನ ಕಣ್ಣುಗಳಿಂದ ಅಡಗಿಸಿ ರಹಸ್ಯ ಬಂಧನದಲ್ಲಿ ಇರಿಸಿದನು. ಈ ವಿಷಯ ತಿಳಿದ ಸಲೀಮ ತನ್ನ ತಂದೆ ಅಕ್ಬರನ ಮೇಲೆ ಯುದ್ಧ ಸಾರಿದನು. ಆದರೆ ಅಕ್ಬರನ ಬೃಹತ ಸೇನೆ ಸಲೀಮನ ಸಣ್ಣ ಸೇನೆಯನ್ನು ಸುಲಭವಾಗಿ ಬಗ್ಗು ಬಡಿಯಿತು. ಅಕ್ಬರ್ ಸಲೀಮನನ್ನು ಬಂಧಿಸಿ ಮರಣ ದಂಡನೆ ವಿಧಿಸಿದನು.

ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada

                ತನ್ನ ಪ್ರಿಯಕರ ಮಾಡಿಕೊಂಡ ಅನಾಹುತದಿಂದ ಅನಾರ್ಕಲಿ ವಿಚಲಿತಳಾದಳು. ಆಕೆ ಅಕ್ಬರನ ಬಳಿ ಹೋಗಿ ಸಲೀಮನನ್ನು ಕ್ಷಮಿಸಿ ಸಾಯಿಸದೇ ಸುಮ್ಮನೆ ಬಿಡಲು ಅಂಗಲಾಚಿ ಬೇಡಿಕೊಂಡಳು. ಅದಕ್ಕೆ ಅಕ್ಬರ್ "ನೀನು ಅವನಿಂದ ಶಾಶ್ವತವಾಗಿ ದೂರಾಗಲು ಒಪ್ಪಿದರೆ ನಾನು ಅವನನ್ನು ಕ್ಷಮಿಸುವೆ" ಎಂದೇಳಿದನು. ಅದಕ್ಕಾಗಿ ಅನಾರ್ಕಲಿ ಒಪ್ಪಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದಳು. ಅಕ್ಬರ್ ಹೇಳಿದಂತೆ ಸಲೀಮನಿಂದ ಶಾಶ್ವತವಾಗಿ ದೂರಾಗಲು ಮುಂದಾದಳು. ಸಲೀಮನ ತಲೆಯಿಂದ ಅನಾರ್ಕಲಿಯನ್ನು ಕೊಲ್ಲುವುದಕ್ಕಾಗಿ ಅಕ್ಬರ ಅವಳನ್ನು ಒಂದು ಗುಮ್ಮಟದಲ್ಲಿ ಸಲೀಮನ ಕಣ್ಣೆದುರಿಗೇನೆ ಜೀವಂತ ಸಮಾಧಿ ಮಾಡಿದನು. ಅವಳು ಸತ್ತಳೆಂದು ತಿಳಿದು ಸಲೀಮ ಸ್ವಲ್ಪ ದಿನ ಕೊರಗಿ ಅವಳನ್ನು ಮರೆತು ಬಿಟ್ಟನು. ಆದರೆ ಅವನೆಂದುಕೊಂಡಂತೆ  ಅನಾರ್ಕಲಿ ಸತ್ತಿರಲಿಲ್ಲ. ಆಕೆ ಅಕ್ಬರನ ಯೋಜನೆಯಂತೆ ಒಂದು ರಹಸ್ಯ ಮಾರ್ಗದ ಮೂಲಕ ಗುಮ್ಮಟದಿಂದ ಹೊರಬಂದು ದೇಶ ಬಿಟ್ಟು ಪಲಾಯನ ಮಾಡಿದ್ದಳು. ಪ್ರಿಯಕರನ ರಕ್ಷಣೆಗಾಗಿ ಆಕೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಆಕೆ ಶಾಶ್ವತವಾಗಿ ದೇಶಾಂತರ ಹೋದಳು. ಆಕೆ ಮರಳಿ ಯಾವತ್ತೂ ಬರಲಿಲ್ಲ.

ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada

                                     ಅನಾರ್ಕಲಿಯ ಅಗಲಿಕೆಯಿಂದ ಭಗ್ನಪ್ರೇಮಿಯಾದ ಸಲೀಮ ಅಕ್ಬರನ ನಿಧನಾನಂತರ ಮೊಘಲ ಸಾಮ್ರಾಟ ಜಹಾಂಗೀರನಾದನು. ಅವನು ಸಾಯುವಾಗ ಅವನ ತುಟಿಗಳ ಮೇಲೆ ಅನಾರ್ಕಲಿಯ ಹೆಸರಿತ್ತು. ಇದಿಷ್ಟು ಸಲೀಮ ಅನಾರ್ಕಲಿಯ ಪ್ರೇಮಕಥೆ. ಈ ಪ್ರೇಮಕಥೆ ನಿಮಗಿಷ್ಟವಾಗಿದ್ದರೆ ತಪ್ಪದೆ ಇದನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ. ಇದೇ ರೀತಿ ಪ್ರೇಮಕಥೆಗಳನ್ನು ಓದಲು ಫೇಸ್ಬುಕ್, ಇನಸ್ಟಾಗ್ರಾಮ್, ಟ್ವೀಟರಗಳಲ್ಲಿ ನನ್ನನ್ನು ಫಾಲೋ ಮಾಡಿ...

ಸಲೀಮ ಅನಾರ್ಕಲಿ ಪ್ರೇಮಕಥೆ : Love Story of Salim Anarkali in Kannada


5) ರೋಮಿಯೋ ಜ್ಯೂಲಿಯೆಟ್ ಪ್ರೇಮಕಥೆ - Love Story of Romeo and Juliet in Kannada 

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

              ಇಟಲಿಯ ವೆರೊನಾ ನಗರದ ಎರಡು ಪ್ರಖ್ಯಾತ ಕುಟುಂಬಗಳಾದ ಮಾಂಟೆಗ್ಯೂ ಮತ್ತು ಕ್ಯಾಪುಲೆಟಗಳ ಮಧ್ಯೆ ಹಲವಾರು ವರ್ಷಗಳಿಂದ ಶೀತಲ ಸಮರ ನಡೆದುಕೊಂಡು ಬಂದಿತ್ತು. ಆ ಎರಡು ಕುಟುಂಬಗಳ ಮಧ್ಯೆ ಆಗಾಗ ನಡೆಯುವ ಕಲಹಗಳಿಂದ ವೆರೊನಾ ನಗರದ ಶಾಂತಿ ಹಾಳಾಗಿತ್ತು. ಹೀಗಾಗಿ ವೆರೊನಾದ ರಾಜ ಪ್ರಿನ್ಸ್ ಎಸ್ಕಾಲಸ್ ಆ ಎರಡು ಕುಟುಂಬಗಳ ಮುಖ್ಯಸ್ಥರಿಗೆ ಬಹಳ ಖಡಕ್ಕಾದ ಎಚ್ಚರಿಕೆಯನ್ನು ಕೊಟ್ಟನು. ಒಂದು ವೇಳೆ ನಿಮ್ಮ ಕಲಹದಿಂದಾಗಿ ನಗರದ ಶಾಂತಿ ಭಂಗವಾದರೆ ಯಾವುದೇ ಮುಲಾಜಿಲ್ಲದೆ ನಿಮಗೆ ಮರಣ ದಂಡನೆ ವಿಧಿಸುವುದಾಗಿ ಹೆದರಿಸಿ ಅವರನ್ನು ಸ್ವಲ್ಪ ಮಟ್ಟಿಗೆ ಶಾಂತವಾಗಿರಿಸಿದನು. ಈ ಶಾಂತ ಸಂದರ್ಭವನ್ನು ಗಮನಿಸಿ ಪ್ರಿನ್ಸ್ ಎಸ್ಕಾಲಸನ ಸೋದರ ಸಂಬಂಧಿಯಾದ ಕೌಂಟ್ ಪ್ಯಾರಿಸ್ ಕ್ಯಾಪುಲೆಟನ ಮಗಳಾದ ಜ್ಯೂಲಿಯಟಳನ್ನು ಮದುವೆಯಾಗುವ ಮನದಿಂಗಿತವನ್ನು ವ್ಯಕ್ತಪಡಿಸುತ್ತಾನೆ. ಆದರೆ ಕ್ಯಾಪುಲೆಟ್ ತನ್ನ ಮಗಳಿನ್ನು ಚಿಕ್ಕವಳಿರುವುದರಿಂದ ಅವನಿಗೆ  ಇನ್ನೆರಡು ವರ್ಷ ಕಾಯಲು ಹೇಳುತ್ತಾನೆ. ಕ್ಯಾಪುಲೆಟನ ಮಾತಿಗೆ ಕೌಂಟ್ ಪ್ಯಾರಿಸ್ ಒಪ್ಪಿಕೊಳ್ಳುತ್ತಾನೆ. ಅವನ ಹಾಗೂ ಜ್ಯೂಲಿಯಟಳ ಮದುವೆ ನಿಗದಿಯಾಗುತ್ತದೆ. ಈ ಖುಷಿಯಲ್ಲಿ ಕ್ಯಾಪುಲೆಟ್ ಒಂದು ಬಾಲರೂಮ್ ಡ್ಯಾನ್ಸ್ ಪಾರ್ಟಿಯನ್ನು ಆಯೋಜಿಸುತ್ತಾನೆ. ಆದರೆ ಜ್ಯೂಲಿಯಟಳಿಗೆ ಈ ಮದುವೆ ಇಷ್ಟವಾಗುವುದಿಲ್ಲ. ಅವಳ ತಾಯಿ ಹಾಗೂ ಅವಳ ನರ್ಸ್ ಅವಳನ್ನು ಈ ಮದುವೆಗೆ ಒಪ್ಪಿಕೊಳ್ಳುವಂತೆ ಪುಸಲಾಯಿಸುತ್ತಾರೆ. ಆದರೆ ಆಕೆ ತನ್ನ ನಿರ್ಧಾರವನ್ನು ತಿಳಿಸದೆ ಅಡ್ಡ ಗೋಡೆಯ ಮೇಲೆ ದೀಪವಿಡುತ್ತಾಳೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

    ಕ್ಯಾಪುಲೆಟನ ಕುಟುಂಬ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡುತ್ತಾ ಸಂತಸದ ಕಡಲಲ್ಲಿ ತೇಲಾಡುತ್ತಿತ್ತು. ಆದರೆ ಅವನ ಬದ್ಧವೈರಿ ಮಾಂಟೆಗ್ಯೂನ ಕುಟುಂಬ ಯಾವುದೇ ಸಡಗರವಿಲ್ಲದೆ ಶಾಂತವಾಗಿತ್ತು. ಮಾಂಟೆಗ್ಯೂವಿನ ಮಗ ರೋಮಿಯೋ ತನ್ನ ಅತ್ತೆ ಮಗಳಾದ ರೊಸಾಲಿನಳನ್ನು ಪ್ರೀತಿಸಿ ಅವಳಿಂದ ದೂರಾಗಿ ವಿರಹ ಯಾತನೆಯನ್ನು ಅನುಭವಿಸುತ್ತಿರುತ್ತಾನೆ. ರೋಮಿಯೊನ ಮನೋಯಾತನೆಗೆ ಕಾರಣವೇನೆಂಬುದು ಅವನ ಚಿಕ್ಕಪ್ಪ ಬೆನ್ವೊಲಿಯೋನಿಗೆ ಗೊತ್ತಾಗುತ್ತದೆ. ಆತ "ರೊಸಾಜಿನ ಕ್ಯಾಪುಲೆಟನ ಡ್ಯಾನ್ಸ್ ಪಾರ್ಟಿಗೆ ಖಂಡಿತ ಬಂದಿರುತ್ತಾಳೆ" ಎಂಬ ನಂಬಿಕೆಯ ಮೇಲೆ ರೋಮಿಯೋನನ್ನು ಕ್ಯಾಪುಲೆಟನ ಪಾರ್ಟಿಗೆ ಹೋಗಿ ಅವಳನ್ನು ಭೇಟಿಯಾಗಿ ಮಾತಾಡಿ ಅವಳ ಮನವೊಲಿಸಿ ರಾಜಿಯಾಗುವಂತೆ ಹೇಳುತ್ತಾನೆ. ಚಿಕ್ಕಪ್ಪನ ಮಾತಿಗೆ ರೋಮಿಯೋ ನಿರಾಕರಿಸಿದಾಗ ಅವನ ಗೆಳೆಯ ಮರ್ಕುಟಿಯೋ ಅವನನ್ನು ಒತ್ತಾಯ ಮಾಡಿ ರೊಸಾಲಿನಳನ್ನು ಭೇಟಿಯಾಗಲು ಕ್ಯಾಪುಲೆಟನ ಪಾರ್ಟಿಗೆ ಕಳುಹಿಸುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                        ರೊಸಾಲಿನಳನ್ನು ಭೇಟಿಯಾಗುವುದಕ್ಕಾಗಿ ರೋಮಿಯೋ ತಮ್ಮ ಬದ್ಧವೈರಿ ಕ್ಯಾಪುಲೆಟನ ಪಾರ್ಟಿಗೆ ಅನುಮತಿಯಿಲ್ಲದೆ ನುಗ್ಗುತ್ತಾನೆ. ಪಾರ್ಟಿಯಲ್ಲಿ ಎಲ್ಲರೂ ಬರೀ ಕಣ್ಣುಗಳಷ್ಟೇ ಕಾಣುವಂತೆ ಮುಖಕ್ಕೆ ಮುಖವಾಡಗಳನ್ನು ಹಾಕಿಕೊಂಡು ಮಧ್ಯ ಸೇವಿಸಿ ಕುಣಿಯುತ್ತಿರುತ್ತಾರೆ. ರೋಮಿಯೋ ಕೂಡ ಮುಖಕ್ಕೆ ಮುಖವಾಡವನ್ನು ಧರಿಸಿ ಆ ಪಾರ್ಟಿಯಲ್ಲಿ ರೊಸಾಲಿನಳನ್ನು ಹುಡುಕಲು ಪ್ರಾರಂಭಿಸುತ್ತಾನೆ. ಆತ ಎಷ್ಟೇ ಹುಡುಕಿದರೂ ಅವನಿಗೆ ರೊಸಾಲಿನ ಸಿಗುವುದಿಲ್ಲ. ಆದರೆ ಅವನಿಗೆ ಅವಳ ಬದಲಾಗಿ ಕ್ಯಾಪುಲೆಟನ ಮಗಳಾದ ಜ್ಯೂಲಿಯಟ್ ಸಿಗುತ್ತಾಳೆ. ರೋಮಿಯೋ ಜ್ಯೂಲಿಯಟಳ ಸುಂದರವಾದ ಕಣ್ಣುಗಳನ್ನು ನೋಡಿ ಅವಳೆಡೆಗೆ ಆಕರ್ಷಿತನಾಗುತ್ತಾನೆ. ಅಷ್ಟರಲ್ಲಿ ಜ್ಯೂಲಿಯಟಳ ಚಿಕ್ಕಪ್ಪ ಟೈಬಾಲ್ಟ ರೋಮಿಯೊನನ್ನು ಗುರ್ತಿಸುತ್ತಾನೆ. ವೈರಿ ಕುಟುಂಬದ ಕುಡಿಯನ್ನು ಹೊಸಕಿ ಹಾಕಬೇಕು ಎಂಬ ಯೋಚನೆ ಟೈಲಾಬ್ಟನ ತಲೆಯಲ್ಲಿ ಬರುತ್ತದೆ. ಆದರೆ ಸಂತಸದ ಪಾರ್ಟಿಯಲ್ಲಿ ರಕ್ತದೊಕಳಿಯನ್ನು ಆಡುವುದು ಉಚಿತವಲ್ಲವೆಂದು ಆತ ಸುಮ್ಮನಾಗುತ್ತಾನೆ. ರೋಮಿಯೋ ಜ್ಯೂಲಿಯಟಳೊಂದಿಗೆ ಮಾತನಾಡಲು ಮುಂದಾಗುತ್ತಾನೆ. ಆದರೆ ಟೈಬಾಲ್ಟ ಮಧ್ಯ ಪ್ರವೇಶಿಸಿದಾಗ ರೋಮಿಯೋ ಅಲ್ಲಿಂದ ಫರಾರಿಯಾಗುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                   ರೋಮಿಯೋ ಜಗಳವಾಡಿಕೊಂಡು ದೂರಾದ ರೊಸಾಲಿನಳನ್ನು ಮರೆತು ಜ್ಯೂಲಿಯಟಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ. ಕಣ್ಣುಗಳಿಂದ ಬಳಿ ಸೆಳೆದ ಸುಂದರಿ ಜ್ಯೂಲಿಯಟಳನ್ನು ಕನಸುಗಳೊಳಗೆ ಬಿಟ್ಟುಕೊಂಡು ನಿದ್ರೆ ಬಾರದೆ ಒದ್ದಾಡುತ್ತಾನೆ. ಮರುದಿನ ರೋಮಿಯೋ ಜ್ಯೂಲಿಯಟಳನ್ನು ಭೇಟಿಯಾಗುವುದಕ್ಕಾಗಿ ರಹಸ್ಯವಾಗಿ ಅವಳ ಮನೆಗೆ ಹೋಗುತ್ತಾನೆ. ಅಷ್ಟರಲ್ಲಿ ಅವಳು ಸಹ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡು ಅವನಿಗಾಗಿ ಕಾಯುತ್ತಿರುತ್ತಾಳೆ. ಆತ ಅವಳ ಮನೆ ಪಕ್ಕದಲ್ಲಿದ್ದ ಮರವನ್ನೇರಿ ಅವಳ ಮಹಡಿ ಮನೆಯನ್ನು ಪ್ರವೇಶಿಸುತ್ತಾನೆ. ರೋಮಿಯೋ ಜ್ಯೂಲಿಯಟಳಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಆಕೆ ಅವನ ಧೈರ್ಯಕ್ಕೆ ಮೆಚ್ಚಿ ಅವನ ಪ್ರೀತಿಯನ್ನು ಕ್ಷಣಾರ್ಧದಲ್ಲೇ ಒಪ್ಪಿಕೊಳ್ಳುತ್ತಾಳೆ. ಆನಂತರ ಅವರಿಬ್ಬರೂ ಎಲ್ಲರ ಕಣ್ತಪ್ಪಿಸಿ ಜ್ಯೂಲಿಯಟಳ ಮನೆ ಬಾಲ್ಕನಿಯಲ್ಲಿ ದಿನಾಲು ಭೇಟಿಯಾಗುತ್ತಾರೆ. ಅವರ ಕಣ್ಣಾಮುಚ್ಚಾಲೆ ಆಟ ಹೀಗೆಯೇ ಕೆಲವು ದಿನಗಳವರೆಗೆ ಸಾಗುತ್ತದೆ. ಅವರಿಗೂ ನಂತರ ತಾವಿಬ್ಬರೂ ಬದ್ಧವೈರಿಗಳ ಕುಟುಂಬದ ಕುಡಿಗಳು ಎಂಬುದು ಗೊತ್ತಾಗುತ್ತದೆ. ಆದರೆ ಅವರಿಗೆ ತಾವು ಶತ್ರುಗಳೆಂಬ ಸತ್ಯ ಗೊತ್ತಾಗುವಷ್ಟರಲ್ಲಿ ಅವರಿಬ್ಬರೂ ಅನ್ಯೋನ್ಯ ಪ್ರೇಮಿಗಳಾಗಿರುತ್ತಾರೆ. ತಮ್ಮ ಕುಟುಂಬಗಳ ಮಧ್ಯೆಯಿರುವ ದ್ವೇಷಕ್ಕೆ ಹೆದರಿ ರೋಮಿಯೋ ಹಾಗೂ ಜ್ಯೂಲಿಯಟರಿಬ್ಬರು ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸರವರ ಸಹಾಯದಿಂದ ಗುಟ್ಟಾಗಿ ಮದುವೆಯಾಗುತ್ತಾರೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                          ಗುಟ್ಟಾಗಿ ಮದುವೆಯಾದ ನಂತರವೂ ರೋಮಿಯೋ ಜ್ಯೂಲಿಯಟರಿಬ್ಬರು ಎಲ್ಲರ ಕಣ್ತಪ್ಪಿಸಿ ಕದ್ದು ಮುಚ್ಚಿ ಭೇಟಿಯಾಗುತ್ತಲೇ ಇರುತ್ತಾರೆ. ಜ್ಯೂಲಿಯಟಳ ಚಿಕ್ಕಪ್ಪ ಟೈಬಾಲ್ಟನಿಗೆ ಇನ್ನೂ ರೋಮಿಯೋ ಮೇಲಿನ ಕೋಪ ತಣ್ಣಗಾಗಿರುವುದಿಲ್ಲ. ಅವನು ರೋಮಿಯೋನ ಮೇಲೆ ಎಗರಿ ಬೀಳಲು ಕಾಯುತ್ತಿರುತ್ತಾನೆ. ಒಂದಿನ ರೋಮಿಯೋ ತನ್ನ ಗೆಳೆಯ ಮರ್ಕುಟಿಯೋನೊಂದಿಗೆ ಬೀದಿಯಲ್ಲಿ ಹೊರಟಿರುವುದನ್ನು ಕಂಡ ಟೈಬಾಲ್ಟ ಅವರೊಂದಿಗೆ ವಾಗ್ವಾದ ನಡೆಸುತ್ತಾನೆ. ಜ್ಯೂಲಿಯಟಳ ಸಂಬಂಧಿ ಎಂಬ ಕಾರಣಕ್ಕೆ ರೋಮಿಯೋ ಸುಮ್ಮನಾಗುತ್ತಾನೆ. ಆದರೆ ಅವನ ಗೆಳೆಯ ಮರ್ಕುಟಿಯೋ ಟೈಬಾಲ್ಟನೊಂದಿಗೆ ಕೈಕೈ ಮಿಲಾಯಿಸುತ್ತಾನೆ. ಈ ಹೊಡೆದಾಟದಲ್ಲಿ ಟೈಬಾಲ್ಟ ಮರ್ಕುಟಿಯೋನನ್ನು ಸಾಯಿಸುತ್ತಾನೆ. ನಂತರ ರೊಚ್ಚಿಗೆದ್ದ ರೋಮಿಯೋ ಟೈಬಾಲ್ಟನನ್ನು ಸಾಯಿಸುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

             ಶಾಂತವಾಗಿದ್ದ ವೆರೊನಾ ನಗರ ಟೈಬಾಲ್ಟನ ಕೊಲೆಯಿಂದಾಗಿ ಮತ್ತೆ ಅಶಾಂತವಾಗುತ್ತದೆ. ಕ್ಯಾಪುಲೆಟ್ ಮತ್ತು ಮಾಂಟೆಗ್ಯೂ ಕುಟುಂಬಗಳ ನಡುವೆ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಗುತ್ತದೆ. ನಗರದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪ್ರಿನ್ಸ್ ಎಸ್ಕಾಲಸ್ ರೋಮಿಯೋನನ್ನು ಗಡಿಪಾರು ಮಾಡುತ್ತಾನೆ. ಒಂದು ವೇಳೆ ರೋಮಿಯೋ ಮರಳಿ ಬಂದರೆ ಅವನನ್ನು ನೇರವಾಗಿ ಗಲ್ಲಿಗೇರಿಸಲಾಗುವುದೆಂದು ಘೋಷಿಸುತ್ತಾನೆ. ರೋಮಿಯೋ ಮಾಡಿಕೊಂಡ ಯಡವಟ್ಟಿನಿಂದಾಗಿ ಜ್ಯೂಲಿಯಟ್ ಕಂಗಾಲಾಗುತ್ತಾಳೆ. ಅವತ್ತಿನ ರಾತ್ರಿ ರೋಮಿಯೋ ಜ್ಯೂಲಿಯಟಳನ್ನು ರಹಸ್ಯವಾಗಿ ಭೇಟಿಯಾಗುತ್ತಾನೆ. ಅವರಿಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಅಳುತ್ತಾರೆ. ನಂತರ ಅವರಿಬ್ಬರೂ ತಮ್ಮ ಮೊದಲ ರಾತ್ರಿಯ ಮಿಲನವನ್ನು ಆಚರಿಸುತ್ತಾರೆ. ಇನ್ಮುಂದೆ ತನಗೆ ರೋಮಿಯೋ ಸಿಗಲ್ಲವೆಂದು ಭಾವಿಸಿ ಜ್ಯೂಲಿಯಟ್ ತನ್ನನ್ನು ಅವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾಳೆ. ಸೂರ್ಯ ಕಣ್ಣು ಬಿಡುವಷ್ಟರಲ್ಲಿಯೇ ರೋಮಿಯೋ ಜ್ಯೂಲಿಯಟಳಿಗೆ ಬಾಯ್ ಹೇಳಿ ವೆರೊನಾ ನಗರ ಬಿಟ್ಟು ಸಮೀಪದ ನಗರ ಸೇರುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                ರೋಮಿಯೋ ವೆರೊನಾ ನಗರದಿಂದ ಶಾಶ್ವತವಾಗಿ ದೂರಾದಾಗ ಜ್ಯೂಲಿಯಟ್ ದು:ಖದಿಂದ ತತ್ತರಿಸುತ್ತಾಳೆ. ಅವಳ ತಾಯಿಗೆ ಅವಳ ಅಳುವಿನ ಹಿಂದಿರುವ ಅಸಲಿ ಕಾರಣ ಗೊತ್ತಾಗುತ್ತದೆ. ಅವರು ಅವಳಿಗೆ ಕೌಂಟ್ ಪ್ಯಾರಿಸನನ್ನು ಸದ್ಯಕ್ಕೆ ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ಆದರೆ ಆಕೆ ತಾಯಿಯ ಒತ್ತಾಯಕ್ಕೆ ಮಣಿಯುವುದಿಲ್ಲ. ಏಕೆಂದರೆ ಆಕೆ ಈಗಾಗಲೇ ರೋಮಿಯೋನನ್ನು ಮದುವೆಯಾಗಿ ಅವನೊಂದಿಗೆ ತನ್ನ ಮೈ ಮನಸ್ಸುಗಳೆರಡನ್ನು ಹಂಚಿಕೊಂಡಿರುತ್ತಾಳೆ. ಮನೆಯವರ ಭಯಕ್ಕೆ ಜ್ಯೂಲಿಯಟ ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸನನ್ನು ಭೇಟಿಯಾಗಿ ಸಹಾಯಕ್ಕಾಗಿ ಅಂಗಲಾಚುತ್ತಾಳೆ. ಆಗ ಆತ ಅವಳಿಗೆ "ಈ ಡ್ರಗ್ಸನ್ನು ತೆಗೆದುಕೋ, ಇದನ್ನು ಸೇವಿಸಿದ ನಂತರ ನೀನು ಎರಡ್ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗುವೆ. ನೀನು ಸತ್ತಂತೆ ನಾಟಕವಾಡು. ಅಷ್ಟರಲ್ಲಿ ನಾನು ರೋಮಿಯೋನನ್ನು ನಿನ್ನ ಬಳಿಗೆ ಕಳುಹಿಸುವೆ. ನೀನು ಪ್ರಜ್ಞೆ ಬಂದ ನಂತರ ರೋಮಿಯೋನೊಂದಿಗೆ ದೂರ ಓಡಿ ಹೋಗಿ ಹಾಯಾಗಿ ಬದುಕು" ಎಂದೇಳಿ ಒಂದು ಔಷಧಿಯನ್ನು ಕೊಡುತ್ತಾನೆ.  ಅವನು ಕೊಟ್ಟ ಔಷಧಿಯನ್ನು ತೆಗೆದುಕೊಂಡು ಜ್ಯೂಲಿಯಟ್ ಮನೆಗೆ ಬರುತ್ತಾಳೆ ಮತ್ತು ಆ ಔಷಧಿಯನ್ನು ಸೇವಿಸುತ್ತಾಳೆ. ಪಾದ್ರಿ ಹೇಳಿದಂತೆ ಅವಳು ಪ್ರಜ್ಞಾಹೀನಳಾಗುತ್ತಾಳೆ. ಅವಳು ಸತ್ತಳೆಂದು ತಿಳಿದು ಅವಳ ಮನೆಯವರು ಗೋಳಿಡುತ್ತಾರೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

               ಪ್ರಜ್ಞಾಹೀನಳಾಗಿದ್ದ ಜ್ಯೂಲಿಯಟ್ ನಿಜವಾಗಿಯೂ ಸತ್ತಿದ್ದಾಳೆಂದು ತಿಳಿದು ಅವಳ ಮನೆಯವರು ಅವಳ ಅಂತ್ಯ ಸಂಸ್ಕಾರದ ಸಿದ್ಧತೆಗಳಿಗೆ ಮುಂದಾಗುತ್ತಾರೆ. ಅವರ ಸಂಪ್ರದಾಯದಂತೆ ಅವಳ ಶವವನ್ನು ಒಂದು ಕೋಫಿನಿನಲ್ಲಿ ಹಾಕಿ ಅವರ ಮನೆಯ ರಹಸ್ಯ ನೆಲಮಾಳಿಗೆಯಲ್ಲಿ ಇಡುತ್ತಾರೆ. ಅವಳು ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸ್ ಮಾತು ಕೇಳಿ ಇಷ್ಟೆಲ್ಲ ಮಾಡಿಕೊಂಡಿರುತ್ತಾಳೆ. ಅವಳಿಗೆ ತಿಳಿಸಿದಂತೆ ಅವಳ ಬಳಿ ರೋಮಿಯೋನನ್ನು ಕಳುಹಿಸುವುದಕ್ಕಾಗಿ ಒಬ್ಬ ದ್ಯೂತನನ್ನು ಕಳುಹಿಸುತ್ತಾನೆ. ಆದರೆ ಆ ದ್ಯೂತ ರೋಮಿಯೋನ ಬಳಿ ಹೋಗಿ ಫ್ರಿಯರ್ ಲಾರೆನ್ಸನ ಪ್ಲ್ಯಾನ್ ತಿಳಿಸುವ ಮುಂಚೆಯೇ ರೋಮಿಯೋ ವೆರೋನಾ ನಗರಕ್ಕೆ ವಾಪಸ್ಸು ಬಂದು ಬಿಡುತ್ತಾನೆ. ಜ್ಯೂಲಿಯಟಳ ಹುಸಿ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಗಡಿಪಾರಾದ ರೋಮಿಯೋನನ್ನು ತಲುಪಿರುತ್ತದೆ. ಅವಳ ಹುಸಿ ಸಾವಿನ ಸುದ್ದಿಯನ್ನು ನಿಜವೆಂದು ನಂಬಿ ರೋಮಿಯೋ ಬಿಕ್ಕಿ ಬಿಕ್ಕಿ ಅಳುತ್ತಾನೆ. ನಂತರ ಹತಾಷೆಯಲ್ಲಿ ಒಂದು ವಿಷದ ಬಾಟಲಿಯನ್ನು ಖರೀದಿಸಿ ಜ್ಯೂಲಿಯಟಳನ್ನು ನೋಡಲು ಹೋಗುತ್ತಾನೆ. ಜ್ಯೂಲಿಯಟಳ ಶವವನ್ನು ಇರಿಸಿದ್ದ ರಹಸ್ಯ ನೆಲಮಾಳಿಗೆಗೆ ರೋಮಿಯೋ ಪ್ರವೇಶಿಸಿರುತ್ತಾನೆ. ಅಷ್ಟರಲ್ಲಿ ಕೌಂಟ್ ಪ್ಯಾರಿಸ್ ಅವಳ ಮೃತ ಶರೀರದ ದರ್ಶನಕ್ಕಾಗಿ ಅಲ್ಲಿಗೆ ಬರುತ್ತಾನೆ. ಜ್ಯೂಲಿಯಟಳ ಸಾವಿಗೆ ಅವನೇ ಕಾರಣನೆಂದು ಕೋಪದಲ್ಲಿ ರೋಮಿಯೋ ಅವನೊಂದಿಗೆ ಕಾದಾಡಿ ಅವನನ್ನು ಸಾಯಿಸುತ್ತಾನೆ. ನಂತರ ಪ್ರಜ್ಞಾಹೀನಳಾಗಿ ಮಲಗಿದ್ದ ಜ್ಯೂಲಿಯಟ್ ನಿಜವಾಗಿಯೂ ಸತ್ತಿದ್ದಾಳೆಂದು ಭಾವಿಸಿ ಅವಳ ಹಣೆಗೆ ಮುತ್ತಿಟ್ಟು ರೋಮಿಯೋ ತಾನು ತಂದಿದ್ದ ವಿಷವನ್ನು ಕುಡಿದು ಪ್ರಾಣ ಬಿಡುತ್ತಾನೆ.

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                     ರೋಮಿಯೋ ಸತ್ತ ಕೆಲವು ಗಂಟೆಗಳ ನಂತರ ಜ್ಯೂಲಿಯಟಳಿಗೆ ಪ್ರಜ್ಞೆ ಬರುತ್ತದೆ. ಆಗ ಆಕೆ ರಕ್ತಸಿಕ್ಕವಾದ ರೋಮಿಯೋನ ಚೂರಿಯನ್ನು ಕಂಡು ಗಾಬರಿಯಾಗುತ್ತಾಳೆ. ಜೊತೆಗೆ ಸತ್ತ ರೋಮಿಯೋನನ್ನು ನೋಡಿ ಎದೆ ಬಡಿದುಕೊಂಡು ಅಳುತ್ತಾಳೆ. ಅವಳಿಂದ ಅವನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. "ಯಾರೊಂದಿಗೆ ನಾನು ಓಡಿಹೋಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದುಕೊಂಡಿದ್ದೇನೋ ಈಗ ಅವನೇ ಸತ್ತು ಮಲಗಿರುವಾಗ ಬದುಕಿ ನಾನೇನು ಸಾಧಿಸಲಿ?" ಎಂಬ ಹತಾಷೆಯಲ್ಲಿ ಜ್ಯೂಲಿಯಟ್ ಚೂರಿಯಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾಳೆ. ಅವಳು ನಿಜವಾಗಿಯೂ ಸತ್ತ ನಂತರ ಅವಳ ಮನೆಯವರು ಆ ರಹಸ್ಯ ನೆಲ ಮಾಳಿಗೆಗೆ ಬರುತ್ತಾರೆ. ಅವರು ಅಲ್ಲಿನ ಪ್ಯಾರಿಸನ ಕೊಲೆ, ರೋಮಿಯೋ ಜ್ಯೂಲಿಯಟರ ಆತ್ಮಹತ್ಯೆ ಎಲ್ಲವನ್ನೂ ನೋಡಿ ಬೆಚ್ಚಿ ಬೀಳುತ್ತಾರೆ. ಅಷ್ಟರಲ್ಲಿ ಪ್ರಿನ್ಸ್ ಎಸ್ಕಾಲಸ್ ಸಹ ಬರುತ್ತಾನೆ. ಅವನ ಬೆನ್ನಿಂದೆ ಚರ್ಚಿನ ಪಾದ್ರಿ ಫ್ರಿಯರ್ ಲಾರೆನ್ಸ್ ಬಂದು ಅವರಿಬ್ಬರ ಮನೆಯವರಿಗೆ ಅವರ ಪ್ರೇಮಕಥೆಯನ್ನು, ರಹಸ್ಯ ವಿವಾಹವನ್ನು ಮತ್ತು ಸತ್ತಂತೆ ನಾಟಕವಾಡಿ ಓಡಿ ಹೋಗುವ ಯೋಜನೆಯನ್ನು ವಿವರಿಸುತ್ತಾನೆ. ರೋಮಿಯೋ ಜ್ಯೂಲಿಯಟರ ದಾರುಣ ಸಾವಿಗೆ ಅವರಿಬ್ಬರ ಮನೆಯವರು ಮರಗುತ್ತಾರೆ. ನಂತರ ಪ್ರಿನ್ಸ್ ಎಸ್ಕಾಲಸ್ ಅವರಿಬ್ಬರ ಮನೆಯವರಿಗೆ ಬುದ್ಧಿ ಹೇಳಿ ರಾಜಿಯಾಗುವಂತೆ ಆದೇಶಿಸುತ್ತಾನೆ. ಈ ರೀತಿ ಕ್ಯಾಪುಲೆಟ್ ಮತ್ತು ಮಾಂಟೆಗ್ಯೂ ಕುಟುಂಬಗಳ ಮಧ್ಯೆ ಎಷ್ಟೋ ವರ್ಷಗಳಿಂದ ಇದ್ದ ಸೇಡು, ದ್ವೇಷ ಎಲ್ಲವೂ ರೋಮಿಯೋ ಜ್ಯೂಲಿಯಟರ ಸಾವಿನೊಂದಿಗೆ ಅಂತ್ಯವಾಗುತ್ತದೆ. 

ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

                                 ದೂರ ಓಡಿ ಹೋಗಿ ಒಂದಾಗಿ ಬಾಳಬೇಕೆಂದಿದ್ದ ಪ್ರೇಮಿಪಕ್ಷಿಗಳು ಸಾವಿನಲ್ಲಿ ಒಂದಾಗಿ ಎರಡು ಬದ್ಧವೈರಿಗಳನ್ನು ಒಂದಾಗಿಸುತ್ತವೆ. ಇದಿಷ್ಟು ರೋಮಿಯೋ ಜ್ಯೂಲಿಯಟರ್ ಪ್ರೇಮಕಥೆ. ಈ ಕಥೆ ನಿಮಗಿಷ್ಟವಾಗಿದ್ದರೆ ಇದನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಜೊತೆಗೆ ಈ ಪ್ರೇಮಕಥೆಯ ಬಗ್ಗೆ ನಿಮಗನ್ನಿಸಿದ್ದನ್ನು ಕಮೆಂಟ್ ಮಾಡಿ. ಶೇಕ್ಸ್‌ಪಿಯರ್ ಸತ್ತ ಮೇಲೂ ಬದುಕಿದ್ದಾನೆ ಎಂಬುದನ್ನು ನಿರೂಪಿಸಲು ಈ ಪ್ರೇಮಕಥೆ ಸಾಕು. ಇದೇ ರೀತಿ ಪ್ರತಿದಿನ ಪ್ರೇಮಕತೆಗಳನ್ನು ಓದಲು ನನ್ನನ್ನು ಫೇಸ್ಬುಕ್, ಇನಸ್ಟಾಗ್ರಾಮ್, ಟ್ವಿಟರ್ ಇತ್ಯಾದಿಗಳಲ್ಲಿ ತಪ್ಪದೆ ಫಾಲೋ ಮಾಡಿ....
ರೋಮಿಯೋ ಜ್ಯೂಲಿಯಟ್ ಪ್ರೇಮಕಥೆ : Love Story of Romeo and Juliet in Kannada

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

            ಶಿವಾಜಿಯ ನಿಧನಾನಂತರ ಮರಾಠಾ ಸಾಮ್ರಾಜ್ಯ ಒಗ್ಗಟ್ಟಿನ ಕೊರತೆಯಿಂದ ಅವನತಿಯ ದಾರಿ ಹಿಡಿಯುವ ಆತಂಕದಲ್ಲಿತ್ತು. ಆದರೆ ಛತ್ರಪತಿ ಶಾಹು ಮಹಾರಾಜರ ದಕ್ಷ ಆಡಳಿತದಿಂದ ಮರಾಠಾ ಸಾಮ್ರಾಜ್ಯಕ್ಕೆ ಮತ್ತೆ ನವಕಳೆ ಬಂದಿತು. ಶಾಹು ಮಹಾರಾಜರಿಂದ ನೇಮಿಸಲ್ಪಟ್ಟ ಪೇಶ್ವೆಗಳು ಮರಾಠಾ ಸಾಮ್ರಾಜ್ಯದ ಬೆನ್ನೆಲುಬಾಗಿದ್ದರು. ಅಂಥ ಪೇಶ್ವೆಗಳಲ್ಲಿ ಬಾಲಾಜಿ ವಿಶ್ವನಾಥರು ಒಬ್ಬರು. ಪೇಶ್ವೆ ಬಾಲಾಜಿ ವಿಶ್ವನಾಥ ಹಾಗೂ ಅವರ ಧರ್ಮಪತ್ನಿ ರಾಧಾಬಾಯಿಯವರ ಮುದ್ದಿನ ಮಗನೇ ಬಾಜೀರಾವ. ಬಾಜೀರಾವನನ್ನು ಎಲ್ಲರೂ ಪ್ರೀತಿಯಿಂದ ರಾವ್ ಎಂದು ಕರೆಯುತ್ತಿದ್ದರು. ಬಾಜೀರಾವ್ ಚಿಕ್ಕ ವಯಸ್ಸಿನಿಂದಲೇ ತನ್ನ ತಂದೆಯ ಜೊತೆ ಸೇರಿ ಕುದುರೆ ಸವಾರಿ, ಕತ್ತಿ ವರಸೆ, ಶಾಸ್ತ್ರಗಳನ್ನು ಬಹಳ ಶ್ರದ್ಧೆಯಿಂದ ಕಲಿತಿದ್ದನು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಮರಾಠಾ ಸಾಮ್ರಾಜ್ಯದ ಉಜ್ವಲ ಭವಿಷ್ಯ ಬಾಜೀರಾವನ ಬಾಲ್ಯದಲ್ಲಿ ಕಂಗೊಳಿಸುತ್ತಿತ್ತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                    ವೀರ ಮರಾಠಾ ಪೇಶ್ವೆ ಬಾಲಾಜಿ ವಿಶ್ವನಾಥರ ಅಕಾಲ ನಿಧನದ ನಂತರ ಛತ್ರಪತಿ ಶಾಹು ಮಹಾರಾಜರು ಅವರ ಮಗ ಬಾಜೀರಾವನನ್ನು ಮರಾಠಾ ಪೇಶ್ವೆಯಾಗಿ ಘೋಷಿಸಿದರು. ತನ್ನ ತಂದೆಯ ನಿಧನದ ನಂತರ ಅಖಂಡ ಮರಾಠಾ ಸಾಮ್ರಾಜ್ಯದ ಜವಾಬ್ದಾರಿ 20ರ ನವಯುವಕನಾಗಿದ್ದ ಬಾಜೀರಾವನ ಹೇಗಲೆರಿತು. ತನ್ನ ತಂದೆಯೊಂದಿಗಿನ ಆಪ್ತ ಒಡನಾಟದಿಂದ ಅವನಿಗೆ ಶಸ್ತ್ರಗಳ ಮೇಲೆ ಸಂಪೂರ್ಣ ಹಿಡಿತು ಸಿಕ್ಕಿತ್ತು. ಜೊತೆಗೆ ಹುಟ್ಟು ಬ್ರಾಹ್ಮಣನಾಗಿರುವುದರಿಂದ ಸಕಲ ಶಾಸ್ತ್ರಗಳ ಅರಿವು ಸಹ ಇತ್ತು. ಹಲವರ ವಿರೋಧದ ನಡುವೆಯು 20ರ ನವ ಯುವಕ ಮರಾಠಾ ಸಾಮ್ರಾಜ್ಯದ ಪೇಶ್ವೆಯಾಗಿರುವುದರಿಂದ ಮರಾಠಾ ಸೈನ್ಯದಲ್ಲಿ ಒಂದು ಮಿಂಚಿನ ಸಂಚಾರ ಶುರುವಾಯಿತು. ನೋಡು ನೋಡುತ್ತಿದ್ದಂತೆ ಬಾಜೀರಾವ ತನ್ನ ಪರಾಕ್ರಮದ ಪ್ರದರ್ಶನದಿಂದ ಬಾಜೀರಾವ ಬಲ್ಲಾಳ ಎಂದು ಹೆಸರುವಾಸಿಯಾದನು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                  ತೋಳಲ್ಲಿ ನೂರಾನೆ ತಾಕತ್ತು, ಕಣ್ಣಲ್ಲಿ ಕೆಂಡದಂಥ ಕೋಪ, ನಡೆಯಲ್ಲಿ ಚಿರತೆಯ ವೇಗದ ಜೊತೆಗೆ ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಿ ಅಖಂಡ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿ ಬಾಜೀರಾವನ ನಿದ್ದೆಗಳನ್ನು ಕಿತ್ತುಕೊಂಡವು. "ರಾತ್ರಿಗಳು ನಿದ್ರಿಸಲು ಮೀಸಲಾಗಿಲ್ಲ. ಶೂರರಿಗೆ ರಾತ್ರಿಗಳು ತಮ್ಮ ಶತ್ರುಗಳನ್ನು ಸದೆ ಬಡಿದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಸುವರ್ಣಾವಕಾಶಗಳಾಗಿವೆ" ಎಂಬುದು ಬಾಜೀರಾವನ ಬಲವಾದ ನಂಬಿಕೆಯಾಗಿತ್ತು. ಮೊಘಲರ ದೆಹಲಿಯ ಕೋಟೆಗಳ ಮೇಲೆ ಮರಾಠಾ ಭಗವಾ ಧ್ವಜಗಳು ರಾರಾಜಿಸುವಂತೆ ಮಾಡುವುದು ಬಾಜೀರಾವನ ಮಹಾಭಿಲಾಷೆಯಾಗಿತ್ತು. ಅವನ ಆರ್ಭಟಕ್ಕೆ ದೆಹಲಿ ಸುಲ್ತಾನರ ಸಿಂಹಾಸನಕ್ಕೆ ನಡುಕ ಉಂಟಾಗುತ್ತಿತ್ತು. ಆತ ತನ್ನ 20 ವರ್ಷಗಳ ಪೇಶ್ವೆ ಪದವಿಯಲ್ಲಿ ಮರಾಠಾ ಸಾಮ್ರಾಜ್ಯದ ವಿಸ್ತಾರಕ್ಕಾಗಿ ಸುಮಾರು 40ಕ್ಕೂ ಹೆಚ್ಚು ಯುದ್ಧಗಳನ್ನು ಮಾಡಿದನು. ಅದರಲ್ಲಿ ಆತ ಯಾವುದರಲ್ಲಿಯೂ ಸೋಲಿನ ರುಚಿ ನೋಡಲಿಲ್ಲ. ಹೆಜ್ಜೆಹೆಜ್ಜೆಗೂ ವಿಜಯಲಕ್ಷ್ಮಿ ಅವನಿಗೆ ಸಾಥ ಕೊಟ್ಟಿದ್ದಳು. ಆತ ನಿಜಕ್ಕೂ ಸೋಲಿಲ್ಲದ ಮರಾಠಾ ಶೂರ.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                        1728ರಲ್ಲಿ ಮಹ್ಮದ ಖಾನ್ ಬಂಗಷನು ಬುಂದೆಲಖಂಡದ ಮೇಲೆ ದಾಳಿ ಅಲ್ಲಿನ ರಾಜಾ ಛತ್ರಸಾಲನನ್ನು ಕುಟುಂಬ ಸಮೇತವಾಗಿ ಸೆರೆಮನೆಗೆ ತಳ್ಳಿದನು. ರಾಜಾ ಛತ್ರಸಾಲನು ಅವನ ಕಣ್ತಪ್ಪಿಸಿ ಮರಾಠಾ ಪೇಶ್ವೆ ಬಾಜೀರಾವನಿಗೆ ಸಹಾಯ ಕೋರಿ ಒಂದು ಗುಪ್ತ ಪತ್ರವನ್ನು ಬರೆದನು. ಆದರೆ ಆ ಸಮಯದಲ್ಲಿ ಬಾಜೀರಾವ ಮಾಳ್ವಾ ಕದನದಲ್ಲಿ ನಿರತನಾಗಿದ್ದನು. ಬಾಜೀರಾವ ಮಾಳ್ವಾ ಕದನದಲ್ಲಿ ವಿಜಯವಾಗಿ ಕೂಡಲೇ ಬುಂದೇಲಖಂಡದ ಮೇಲೆ ದಾಳಿ ಮಾಡಿ ಬಂಗಷನನ್ನು ಸದೆ ಬಡಿದು ರಾಜಾ ಛತ್ರಸಾಲನನ್ನು ಬಂಧಮುಕ್ತಗೊಳಿಸಿದನು. ಈ ಖುಷಿಯಲ್ಲಿ ರಾಜಾ ಛತ್ರಸಾಲನು ಬಾಜೀರಾವನಿಗೆ ತನ್ನ ಸಾಮ್ರಾಜ್ಯದ ಒಂದು ಭಾಗದ ಜೊತೆಗೆ 33 ಲಕ್ಷ ಚಿನ್ನದ ವರಹಗಳನ್ನು ಸೇರಿ ಇನ್ನು ಕೆಲವು ಬೆಲೆ ಬಾಳುವ ಉಡುಗೊರೆಗಳನ್ನು ನೀಡಿದನು. ಆತ ಬಾಜೀರಾವನನ್ನು ಉಚಿತ ರೀತಿಯಲ್ಲಿ ಸತ್ಕರಿಸಿದನು. ಅವನನ್ನು ಬಿಳ್ಕೊಡುವಾಗ ರಾಜಾ ಛತ್ರಸಾಲನು ತನ್ನ ಮಗಳಾದ ಮಸ್ತಾನಿಯ ಕೈಯನ್ನು ಮದುವೆಯಾಗುವುದಕ್ಕಾಗಿ ಬಾಜೀರಾವನಿಗೆ ನೀಡಿದನು. 

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                    ರಾಜಾ ಛತ್ರಸಾಲನ ಅತಿಥಿಯನ್ನು ನಿರಾಕರಿಸುವ ಮನಸ್ಸಾಗದೆ ಬಾಜೀರಾವ ಮಸ್ತಾನಿಯೊಂದಿಗೆ ವಿವಾಹವಾಗಿ ಪುಣೆಯ ದಾರಿ ಹಿಡಿದನು. ಮಸ್ತಾನಿಯನ್ನು ನೋಡುವುದಕ್ಕಿಂತ ಮುಂಚೆ ಬಾಜೀರಾವ ಅವಳ ಬಗ್ಗೆ ಬಹಳಷ್ಟು ಕೇಳಿದ್ದನು. ಆಕೆ ಕೇವಲ ಸೌಂದರ್ಯದ ಸೆಲೆಯಾಗಿ ಉಳಿಯದೇ ಬಹುಮುಖ ಪ್ರತಿಭೆಯಾಗಿದ್ದಳು. ಆಕೆ ಕುದುರೆ ಸವಾರಿ, ಕತ್ತಿ ವರಸೆ, ಶಾಸ್ತ್ರಗಳ ಅಧ್ಯಯನ, ಯುದ್ಧನೀತಿ, ಕವಿತೆಗಳನ್ನು ಬರೆಯುವುದು, ಸಂಗೀತ ವಾದ್ಯ ಗಳನ್ನು ನುಡಿಸುವುದು, ನೃತ್ಯ ಮಾಡುವುದರಲ್ಲಿ ಪ್ರವೀಣೆಯಾಗಿದ್ದಳು. ಅವಳ ಸೌಂದರ್ಯಕ್ಕಿಂತ ಅಧಿಕವಾಗಿ ಅವಳ ಬಹುಮುಖ ಪ್ರತಿಭೆಗೆ ಮನಸೋತು ಬಾಜೀರಾವ ಮಸ್ತಾನಿಯನ್ನು ಮನಸಾರೆ ಪ್ರೀತಿಸಲು ಪ್ರಾರಂಭಿಸಿದನು. ಈ ನವ ಜೋಡಿ ಪ್ರೇಮ ಪಕ್ಷಿಗಳು ನೂರಾರು ರೊಮ್ಯಾಂಟಿಕ್ ಕನಸುಗಳನ್ನು ಕಟ್ಟಿಕೊಂಡು ಪುಣೆಗೆ ಆಗಮಿಸಿದರು. ಆದರೆ ಪುಣೆಯಲ್ಲಿ ಅವರಿಗೆ ಬೇರೆ ರೀತಿಯ ಅತಿಥ್ಯ ಕಾದಿತ್ತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                         ಮಸ್ತಾನಿ ಬಾಜೀರಾವ ಬಲ್ಲಾಳನ ಎರಡನೇ ಪತ್ನಿಯಾಗಿ ಪುಣೆಗೆ ಆಗಮಿಸಿದ್ದು ಅವನ ಮನೆಯವರಷ್ಟೇ ಅಲ್ಲದೆ ಇಡೀ  ಮರಾಠಾ ಸಾಮ್ರಾಜ್ಯಕ್ಕೆ ಕಸಿವಿಸಿ ಉಂಟು ಮಾಡಿತ್ತು. ಅಪ್ಪಟ ಬ್ರಾಹ್ಮಣರಾದ ಬಾಜೀರಾವನ ಮನೆಯವರು ಅರ್ಧ ಮುಸ್ಲಿಂ ಅರ್ಧ ಹಿಂದುವಾದ ಮಸ್ತಾನಿಯನ್ನು ಮನೆಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅವಳ ತಂದೆ ರಾಜಾ ಛತ್ರಸಾಲನು ಹಿಂದುವಾಗಿದ್ದನು. ಆದರೆ ಅವಳ ತಾಯಿ ರುಹಾನಿಬಾಯಿ ಬೇಗಂ ಮುಸ್ಲಿಮಳಾಗಿದ್ದಳು. ಮಸ್ತಾನಿ ತಂದೆಯಂತೆ ಶ್ರೀಕೃಷ್ಣನ ಭಕ್ತಳಾಗಿದ್ದರೂ ಸಹ ತಾಯಿಯಂತೆ ಮುಸ್ಲಿಂ ಸಂಪ್ರದಾಯವನ್ನು ಅನುಸರಿಸಿದ್ದಳು. ಹೀಗಾಗಿ ಅರೆಹಿಂದುವಾದ ಮಸ್ತಾನಿಯನ್ನು ಮನೆ ಸೊಸೆಯಾಗಿಸಿಕೊಳ್ಳಲು ಬಾಜೀರಾವನ ತಾಯಿ ರಾಧಾಬಾಯಿ ಹಿಂದೇಟು ಹಾಕಿದರು. ಎಲ್ಲರ ವಿರೋಧದ ನಡುವೆಯು ಬಾಜೀರಾವ ಮಸ್ತಾನಿಯನ್ನು ಪುಣೆಯ ಶನಿವಾರವಾಡಾದಲ್ಲಿ ಇರಿಸಿದನು. ಆದರೆ ಅವನ ಮನೆಯವರು ಅವಳನ್ನು ಪ್ರತಿಕ್ಷಣ ಮಾತಿನಿಂದ ಕೊಲ್ಲಲು ಪ್ರಾರಂಭಿಸಿದರು. ಸಾಲದಕ್ಕೆ ಅವಳು ಬಾಜೀರಾವನ ಪತ್ನಿಯಲ್ಲ, ಇಟ್ಟುಕೊಂಡ ಉಪಪತ್ನಿ ಎಂದೆಲ್ಲ ಹೀಯಾಳಿಸಿ ಅವಮಾನ ಮಾಡಿದರು. ತನ್ನ ಪ್ರೇಯಸಿ ಈ ರೀತಿಯ ಚುಚ್ಚು ಮಾತುಗಳನ್ನು ಕೇಳಿ ಕೊರಗುತ್ತಿರುವುದನ್ನು ಕಂಡ ಬಾಜೀರಾವ ಅವಳಿಗಾಗಿ ಪ್ರತ್ಯೇಕವಾದ ಒಂದು ಅರಮನೆಯನ್ನು ಕಟ್ಟಿದನು. ಮಸ್ತಾನಿ ಶನಿವಾರವಾಡಾವನ್ನು ಬಿಟ್ಟು  ಅಲ್ಲಿ ವಾಸಿಸಲು ಪ್ರಾರಂಭಿಸಿದಾಗ ಆ ಅರಮನೆಗೆ ಮಸ್ತಾನಿ ಮಹಲ ಎಂಬ ಹೆಸರು ಬಂದಿತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

               ಮಸ್ತಾನಿ ಶನಿವಾರವಾಡಾ ಬಿಟ್ಟು ಬೇರೆ ಮನೆಯಲ್ಲಿದ್ದರೂ ಬಾಜೀರಾವನ ಮನೆಯವರಿಗೆ ಅವಳ ಮೇಲಿನ ವೈಮನಸ್ಸು ಕಮ್ಮಿಯಾಗಿರಲಿಲ್ಲ. ಅವರು ಬಾಜೀರಾವನನ್ನು ಅವಳಿಂದ ದೂರವಿರಿಸಲು ಸಾಕಷ್ಟು ಕುಟಿಲತೆಗಳನ್ನು ಮಾಡಿದರು. ಆದರೆ ಬಾಜೀರಾವ "ನಾನು ಮಸ್ತಾನಿಯನ್ನು ಪ್ರೀತಿಸಿ ಮದುವೆಯಾಗಿರುವೆ. ಯಾವುದೇ ಕಾರಣಕ್ಕೂ ನಾನು ಅವಳ ಕೈಬಿಡಲ್ಲ" ಎಂದೇಳಿ ಎಲ್ಲರ ಬಾಯ್ಮುಚ್ಚಿಸಿದನು. ಆದರೆ ಅವನ ಮೊದಲ ಹೆಂಡತಿ ಕಾಶಿಬಾಯಿ ಅವನ ಮಾತುಗಳನ್ನು ಕೇಳಿ ಸುಮ್ಮನೆ ಕೂಡಲಿಲ್ಲ. ಆಕೆ ಅವನನ್ನು ಚುಚ್ಚು ಮಾತುಗಳಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಾರಂಭಿಸಿದಳು. ಕಾಶೀಬಾಯಿಗೆ ಮಸ್ತಾನಿಯ ಮೇಲೆ ಯಾವುದೇ ದೊಡ್ಡ ಕೋಪವಿರಲಿಲ್ಲ. ಆದರೆ ಆಕೆ ಮರಾಠಾ ಸಾಮ್ರಾಜ್ಯದ ಉನ್ನತಿಗಾಗಿ ಬದ್ಧವೈರಿಗಳಾದ ಮುಸ್ಲಿಮರನ್ನು ದ್ವೇಷಿಸುತ್ತಿದ್ದಳು. ಅವಳಿಗೆ ಮಸ್ತಾನಿ ಮೇಲಿನ ಕೋಪಕ್ಕಿಂತ ಮರಾಠಾ ಸಾಮ್ರಾಜ್ಯದ ಮೇಲಿನ ಪ್ರೀತಿಯೇ ಹೆಚ್ಚಾಗಿತ್ತು. ಅದಕ್ಕಾಗಿ ಆಕೆ ಮಸ್ತಾನಿಯ ವಿಷಯದಲ್ಲಿ ಮೌನ ತಾಳಿ ಬಾಜೀರಾವನೊಂದಿಗೆ ಸಂಸಾರ ಸಾಗಿಸಿ ಮೂರು ಮಕ್ಕಳ ತಾಯಿಯಾದಳು. ಆದರೂ ಅವಳು ತನ್ನ ಅತ್ತೆಗೆ ಹೆದರಿ ಮಸ್ತಾನಿಯನ್ನು ದ್ವೇಷಿಸುವಂತೆ ನಟಿಸುತ್ತಿದ್ದಳು. ಏಕೆಂದರೆ ಆವಾಗಿನ ಕಾಲದಲ್ಲಿ ರಾಜಮಹಾರಾಜರು ನಾಲ್ಕಾರು ಪತ್ನಿಯರನ್ನು ಹೊಂದುವುದು ಸಾಮಾನ್ಯ ಸಂಗತಿಯಾಗಿತ್ತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                     ಬಾಜೀರಾವನ ಮನೆಯವರನ್ನು ಸೇರಿ ಮರಾಠಾ ಪ್ರಮುಖರು ಮಸ್ತಾನಿಯನ್ನು ದ್ವೇಷಿಸುತ್ತಲೇ ಬಂದರು. ಆದರೆ ಬಾಜೀರಾವ ಮಾತ್ರ ಮಸ್ತಾನಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಲೇ ಬಂದನು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಮಸ್ತಾನಿ ಓರ್ವ ಗಂಡು ಮಗುವಿಗೆ ಜನ್ಮವಿತ್ತಳು. ಮಸ್ತಾನಿ ಆ ಮಗುವಿಗೆ ಪ್ರೀತಿಯಿಂದ ಕೃಷ್ಣ ರಾವ್ ಎಂದು ಕರೆದಳು. ಆದರೆ ಪುಣೆಯಲ್ಲಿನ ಬ್ರಾಹ್ಮಣರು ಮಸ್ತಾನಿಯ ಮಗ ಕೃಷ್ಣನಿಗೆ ಉಪನಯನ ಮಾಡದೆ ತಮ್ಮ ಜಾತಿ ರಾಜಕಾರಣವನ್ನು ಹಾಗೆಯೇ ಮುಂದುವರೆಸಿದರು. ಇದರಿಂದ ಕೆರಳಿದ ಬಾಜೀರಾವ ಕೃಷ್ಣರಾವನ ಹೆಸರನ್ನು ಶಮಶೇರ್ ಬಹಾದ್ದೂರ ಎಂದು ಬದಲಿಸಿ ಬ್ರಾಹ್ಮಣರ ಹಠಕ್ಕೆ ತಕ್ಕ ತಿರುಗೇಟು ನೀಡಿದನು. ಈ ಘಟನೆ ಮರಾಠರಿಗೆ ಮಸ್ತಾನಿ ಮೇಲಿದ್ದ ವೈಮನಸ್ಸನ್ನು ಮತ್ತಷ್ಟು ಹೆಚ್ಚಿಸಿತು. ಮಸ್ತಾನಿಯ ವಿಷಯವಾಗಿ ಬಾಜೀರಾವನ ಮನೆಯಲ್ಲಿ ಪದೇಪದೇ ವಾಗ್ವಾದಗಳು ಆಗುತ್ತಲೇ ಹೋದವು. ಇದರಿಂದ ಬಾಜೀರಾವ ಮಾನಸಿಕವಾಗಿ ಕುಗ್ಗಿ ಹೋದನು. ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪತ್ನಿ ಕಾಶೀಬಾಯಿ ಹಾಗೂ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಸ್ತಾನಿ, ಈ ಇಬ್ಬರ ಪ್ರೇಮದ ಮಧ್ಯೆ ಸಿಲುಕಿ ಬಾಜೀರಾವ ನಲುಗಿ ಹೋದನು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                ತಾನು ಪ್ರೀತಿಸಿ ಮದುವೆಯಾದ ಹೆಣ್ಣಿಗೆ ಮನೆಯಲ್ಲಿ, ಸಮಾಜದಲ್ಲಿ ಗೌರವ ತಂದು ಕೊಡಲಾಗಲಿಲ್ಲವೆಂಬ ಕೊರಗಿನಲ್ಲಿ ಬಾಜೀರಾವ ಪೇಶ್ವೆ ಪದವಿಯ ಮೇಲಿನ ನಿಷ್ಠೆಯನ್ನು ಕಡಿಮೆ ಮಾಡಿದನು. ಮರಾಠರಿಗೆ ತಮ್ಮ ಸಾಮ್ರಾಜ್ಯ ವಿಸ್ತರಣೆ ಮುಖ್ಯವಾಗಿತ್ತು. ಆದರೆ ಬಾಜೀರಾವನಿಗೆ ಸದ್ಯಕ್ಕೆ ಮಸ್ತಾನಿಯ ಆತ್ಮಸನ್ಮಾನ ಹಾಗೂ ಗೌರವ ಮುಖ್ಯವಾಗಿತ್ತು. ಮಸ್ತಾನಿ ಬಾಜೀರಾವನ ಜೊತೆ ಸೇರಿ ಎಷ್ಟೋ ಯುದ್ಧಗಳಲ್ಲಿ ಮರಾಠಾ ಸಾಮ್ರಾಜ್ಯದ ವಿಸ್ತರಣೆಗಾಗಿ ಹೋರಾಡಿದ್ದಳು. ಆದರೂ ಅವಳನ್ನು ಮನೆ ಸೊಸೆಯಾಗಿ ಆದರಿಸಲು ಬಾಜೀರಾವನ ಮನೆಯವರು ಒಪ್ಪಲಿಲ್ಲ. ಸತತ 20 ವರ್ಷಗಳ ಕಾಲ ಮರಾಠಾ ಸಾಮ್ರಾಜ್ಯ ವಿಸ್ತರಣೆಗಾಗಿ 41 ಯುದ್ಧಗಳನ್ನು ಗೆದ್ದ ಸೋಲಿಲ್ಲದ ಸರದಾರ ಬಾಜೀರಾವ ಮಸ್ತಾನಿಯ ವಿಷಯದಲ್ಲಿ ತನ್ನ ಮನೆಯವರ ಮನಸ್ಸನ್ನು ಗೆಲ್ಲುವಲ್ಲಿ ಹೀನಾಯವಾಗಿ ಸೋತನು. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ನೇರವಾಗಿ ದೆಹಲಿಯ ಮೇಲೆ ದಾಳಿ ಅಖಂಡ ಹಿಂದು ಸಾಮ್ರಾಜ್ಯದ ವಿಜಯ ಪತಾಕೆಯನ್ನು ಹಾರಿಸಲು ಮರಾಠಾ ಸೈನ್ಯ ಸಮರ್ಥವಾಗಿ ಬಾಜೀರಾವನಿಗಾಗಿ ಕಾಯುತ್ತಾ ನಿಂತಿತ್ತು. ಛತ್ರಪತಿ ಶಾಹು ಮಹಾರಾಜರ ಆದೇಶದ ಮೇರೆಗೆ ಮರಾಠಾ ಸೈನ್ಯ ಬಾಜೀರಾವನ ನೇತೃತ್ವದಲ್ಲಿ ದೆಹಲಿಯ ಕಡೆಗೆ ವೀರಾವೇಶದಿಂದ ಸಾಗಿತು.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                      ಬಾಜೀರಾವ ಯುದ್ಧಕ್ಕೆ ಹೋಗಿರುವುದರಿಂದ ಮಸ್ತಾನಿ ತನ್ನ ಮಹಲಿನಲ್ಲಿ ಒಂಟಿಯಾಗಿರುವುದನ್ನು ಗಮನಿಸಿ ಬಾಜೀರಾವನ ತಮ್ಮ ಚಿಮಾಜಿ ಅಪ್ಪ ಮಸ್ತಾನಿಯನ್ನು ಗೃಹ ಬಂಧನದಲ್ಲಿ ಇರಿಸಿದನು. ಅತ್ತ ಕಡೆ ಬಾಜೀರಾವ ನರ್ಮದಾ ನದಿ ತೀರದ ರಾವರಖೇಡಿ ಎಂಬಲ್ಲಿ ದೇಹದ ಉಷ್ಣತಾ ಹೊಡೆತದಿಂದ ಸಾವನ್ನಪ್ಪಿದನು. ಆತ ಗತಿಸಿದ ಒಂದು ವರ್ಷದೊಳಗೆ ಮಸ್ತಾನಿ ಸಹ ದೇಹತ್ಯಾಗ ಮಾಡಿದಳು. ಅವಳ ಸಾವಿನ ಬಗ್ಗೆ ಸ್ಪಷ್ಟವಾದ ಲಿಖಿತ ಮಾಹಿತಿಯಿಲ್ಲ. ಆಕೆ ಬಾಜೀರಾವನ ಸಾವಿನ ಸುದ್ದಿ ಕೇಳಿ ಎದೆಯೊಡೆದು ಸತ್ತಳು ಎಂಬ ಮಾತಿದೆ. ಅದರ ಜೊತೆಗೆ ಆಕೆ ಬಾಜೀರಾವನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ತನ್ನ ವಜ್ರದುಂಗುರವನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡು ಸತ್ತಳು ಎಂಬ ಮಾತು ಇದೆ. ಮನಸಾರೆ ಪ್ರೀತಿಸಿ ಮದುವೆಯಾದ ಬಾಜೀರಾವ ಮಸ್ತಾನಿಯರು ಜಾತಿ ರಾಜಕಾರಣದ ವಿಷದಿಂದಾಗಿ ನೆಮ್ಮದಿಯಾಗಿ ಬಾಳಲಾರದೆ ಕಣ್ಣೀರಲ್ಲಿ ಕೈ ತೊಳೆದು ಕಣ್ಮರೆಯಾದರು. ಇಂದಿಗೂ ಅವರನ್ನು ಇತಿಹಾಸ ನೆನೆಯುತ್ತದೆ.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

                ಈ ಬಾಜೀರಾವ ಮಸ್ತಾನಿಯ ಪ್ರೇಮಕಥೆ ದಿನಾಲು ನನ್ನನ್ನು ಕಾಡುತ್ತದೆ. ಏಕೆಂದರೆ ಅವರಿದ್ದ ಪುಣೆ ನಗರದಲ್ಲಿ ನಾನು ವಾರಕ್ಕೊಮ್ಮೆ ಓಡಾಡುತ್ತೇನೆ. ಕಳೆದ ವರ್ಷ ನಾನು ಪುಣೆಯಲ್ಲಿ ಫ್ಯಾಷನ್ ಫೋಟೋಗ್ರಾಫಿ ಕಲಿಯಲು ಕಾಲೇಜು ಸೇರಿದಾಗ ಬಾಜೀರಾವನ ಶನಿವಾರವಾಡಾ ಹಾಗೂ ಮಸ್ತಾನಿಯ ಮಸ್ತಾನಿ ಮಹಲನ್ನು ದಿನಾ ನೋಡುತ್ತಿದ್ದೆ. ಏಕೆಂದರೆ ನಮ್ಮ ಕಾಲೇಜು ಅದೇ ಬೀದಿಯಲ್ಲಿತ್ತು. ಈಗಲೂ ಅಷ್ಟೇ ನಾನು ನನ್ನ ಬ್ಯುಸಿನೆಸ್  ನಿಮಿತ್ಯವಾಗಿ ವಾರಕ್ಕೊಮ್ಮೆ  ಪುಣೆಗೆ ಹೋದಾಗ ಅಲ್ಲಿಗೆ ಹೋಗಿಯೇ ಬರುವೆ. ಏಕೆಂದರೆ ಪುಣೆಗೆ ಹೋದ ಮೇಲೆ ಶನಿವಾರವಾಡಾ ಕಣ್ಣಿಗೆ ಬೀಳದೆ ಇರದು. ನೀವು ಯಾವತ್ತಾದ್ರೂ ಪುಣೆಗೆ ಹೋದರೆ ತಪ್ಪದೆ ಶನಿವಾರವಾಡಾ ಮತ್ತು ಮಸ್ತಾನಿ ಮಹಲನ್ನು ನೋಡಿಕೊಂಡು ಬನ್ನಿ. ಮಸ್ತಾನಿ ಮಹಲ ಸದ್ಯಕ್ಕೆ ದಿನನಾಥ ಕೇಳ್ಕರ ವಸ್ತು ಸಂಗ್ರಹಾಲಯದ ಆವರಣದಲ್ಲಿ ಸೇರಿಕೊಂಡಿದೆ. ಸದ್ಯಕ್ಕೆ ಅವುಗಳಲ್ಲಿ ಹೇಳಿಕೊಳ್ಳುವಂಥ ವೈಭವವೇನು ಉಳಿದಿಲ್ಲ. ಆದರೆ ಒಂದ್ಸಲ ನೋಡುವುದರಲ್ಲಿ ಅಡ್ಡಿಯೆನಿಲ್ಲ. ನನಗಿರುವ ಮತ್ತೊಂದು ಬೇಜಾರು ಏನೆಂದರೆ ಅವತ್ತು ಮಸ್ತಾನಿ ಮಹಲಿನ ನೆರಳಿನಂತೆ ಇದ್ದ ಬೀದಿ ಇವತ್ತು ಬುಧವಾರ ಪೇಠ ಎಂಬ ಹೆಸರಿನಿಂದ ವೈಷ್ಯವರ ಸ್ವರ್ಗವಾಗಿದೆ. ಬೆಳಿಗ್ಗೆ ಪುಸ್ತಕಗಳ ಮಳಿಗೆಯಾಗಿ ತೆರೆದುಕೊಳ್ಳುವ ಆ ಬೀದಿ ಸಂಜೆಯಾಗುತ್ತಿದ್ದಂತೆ ರೆಡಲೈಟ್ ಏರಿಯಾವಾಗಿ ಬಿಡುತ್ತದೆ. ಅದು ಬೇರೆ ವಿಷಯ ಬಿಡಿ. ಬಾಜೀರಾವ ಮಸ್ತಾನಿಯ ಈ ಪ್ರೇಮಕಥೆಯನ್ನು ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಪ್ರತಿದಿನ ಇದೇ ರೀತಿ ಪ್ರೇಮಕಥೆಗಳನ್ನು ಓದಲು ಫೇಸ್ಬುಕ್, ಇನಸ್ಟಾಗ್ರಾಮ, ಟ್ವೀಟರ ಇತ್ಯಾದಿಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ.

ಬಾಜೀರಾವ ಮಸ್ತಾನಿ ಪ್ರೇಮಕಥೆ : Love Story of Bajirao and Mastani in Kannada

Blogger ನಿಂದ ಸಾಮರ್ಥ್ಯಹೊಂದಿದೆ.